ಕಮಲನಗರ ಆಸ್ಪತ್ರೆಗೆ ಶಾಸಕ ಪ್ರಭು ಚವ್ಹಾಣ ದಿಢೀರ್ ಭೇಟಿ

KannadaprabhaNewsNetwork |  
Published : Jun 17, 2024, 01:41 AM IST
ಚಿತ್ರ 16ಬಿಡಿಆರ್51ಎ | Kannada Prabha

ಸಾರಾಂಶ

ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಭಾನುವಾರ ಕಮಲನಗರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಕಮಲನಗರ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ರವಿವಾರ ಕಮಲನಗರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿರುವ ವೈದ್ಯರ ಪೈಕಿ ಕೆಲವರು ಮಾತ್ರ ಹಾಜರಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಅನಧಿಕೃತವಾಗಿ ಗೈರಾಗುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.

ನಂತರ ಆಸ್ಪತ್ರೆ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಔಷಧದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬಡ ಜನತೆ ಬರುವುದರಿಂದ ಅವರೊಂದಿಗೆ ಎಲ್ಲ ಸಿಬ್ಬಂದಿ ಸೌಜನ್ಯತೆಯಿಂದ ವ್ಯವಹರಿಸಬೇಕು. ಅವರಿಗೆ ಯಾವುದೇ ರೀತಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಗಳೆಷ್ಟು?, ಎಷ್ಟು ಬೆಡ್‌ಗಳಿವೆ ಮತ್ತು ರೋಗಿಗಳ ಸಂಖ್ಯೆಯೆಷ್ಟು? ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ?, ಔಷಧ ಲಭ್ಯತೆ ಹೀಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

ಎಕ್ಸರೇ ವಿಭಾಗದಲ್ಲಿ ತಜ್ಞರು ಲಭ್ಯವಿಲ್ಲದಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿ, ಉತ್ತಮ ಕೋಣೆ ಹಾಗೂ ಯಂತ್ರ ಲಭ್ಯವಿದೆಯಾದರೂ ತಜ್ಞ ಸಿಬ್ಬಂದಿ ಲಭ್ಯವಿಲ್ಲ. ಎಕ್ಸರೇ ನಿರ್ವಹಣೆಗೆ ಹೊಸ ಸಿಬ್ಬಂದಿ ನಿಯೋಜಿಸುವಂತೆ ಡಿಎಚ್‌ಓಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿಯು ಹಿಗೆಯೇ ಸರ್ಕಾರಿ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡುತ್ತೇನೆ. ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೆ ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದನ್ನು ತಪ್ಪಿಸಬೇಕೆಂದು ತಿಳಿಸಿದರಲ್ಲದೇ ಆಸ್ಪತ್ರೆ ಸುಧಾರಣೆಗೆ ಏನೇನು ಬೇಕೆಂಬುದರ ಬಗ್ಗೆ ಪಟ್ಟಿ ಸಿದ್ಧಪಡಿಸಿಕೊಟ್ಟಲ್ಲಿ ಒದಗಿಸಲಾಗುವುದೆಂದು ಭರವಸೆ ನೀಡಿದರು.

ವೈದ್ಯಕೀಯ ಕೆಲಸ ಅತ್ಯಂತ ಪವಿತ್ರವಾದ ಕೆಲಸ. ಈ ಕೆಲಸದಲ್ಲಿ ಬೇಜವಾಬ್ದಾರಿ ಎಂದಿಗೂ ಸಹಿಸುವುದಿಲ್ಲ. ಆಸ್ಪತ್ರೆ ಎಲ್ಲ ಸಿಬ್ಬಂದಿ ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು. ಎಲ್ಲರೂ ಸಮಯ ಪಾಲನೆ ಮಾಡಬೇಕು. ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಚಿಕಿತ್ಸೆ ನೀಡಬೇಕು. ಯಾವುದೇ ರೀತಿ ದೂರುಗಳು ಬಂದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದೊಂಢಿಬಾ ನರೋಟೆ, ಪ್ರವೀಣ ಕಾರಬಾರಿ, ಶಿವಕುಮಾರ ವಡ್ಡೆ, ನಾಗೇಶ ಪತ್ರೆ, ರಾಜು ಅಲಬಿದೆ, ಸಚಿನ ರಾಠೋಡ್, ರಾಜು ಶೆಳ್ಕೆ, ಸಂಜು ಮುರ್ಕಿ ಹಾಗೂ ಇತರರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ