ಪಹಲ್ಗಾವ್‌ನಲ್ಲಿನ ಉಗ್ರರ ದಾಳಿಗೆ ಶಾಸಕ ಪ್ರದೀಪ್ ಈಶ್ವರ್ ಖಂಡನೆ

KannadaprabhaNewsNetwork | Published : Apr 24, 2025 12:07 AM

ಸಾರಾಂಶ

ನನಗೆ ನನ್ನ ದೇಶದ ಸೈನಿಕರ ಮೇಲೆ ಹೆಮ್ಮೆ ಇದೆ. ಅವರು ಎಂತಹ ಭಯೋತ್ಪಾದಕರನ್ನೇ ಆಗಲಿ ಅಟ್ಟಾಡಿಸಿ, ಉಡಾಯಿಸುವಂತಹ ಶಕ್ತಿ ಇದೆ ಎಂಬ ದೃಢನಂಬಿಕೆಯನ್ನು ದೇಶದ ಸೈನ್ಯದ ಮೇಲೆ ದೇಶದ ಜನತೆ ಇಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಶ್ಮೀರದ ಪೆಹಲ್ಗಾವ್‌ನಲ್ಲಿ ನಿನ್ನೆ ನಡೆದ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದ್ದು, ಉಗ್ರರ ದಾಳಿಗೆ ನನ್ನ ಸೈನಿಕರು ಸಹಾ ಉಗ್ರರಿಗೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಉತ್ತರಿಸುತ್ತಾರೆ. ನಮ್ಮ ಭಾರತೀಯ ಸೈನಿಕರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಮತದಾರರ ಸಮಸ್ಯೆಗಳನ್ನು ಆಲಿಸುವ ಯೋಜನೆಯಡಿ 8ನೇ ವಾರ್ಡ್‌ನಲ್ಲಿ ಬುಧವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನನ್ನ ದೇಶದ ಸೈನಿಕರ ಮೇಲೆ ಹೆಮ್ಮೆ ಇದೆ. ಅವರು ಎಂತಹ ಭಯೋತ್ಪಾದಕರನ್ನೇ ಆಗಲಿ ಅಟ್ಟಾಡಿಸಿ, ಉಡಾಯಿಸುವಂತಹ ಶಕ್ತಿ ಇದೆ ಎಂಬ ದೃಢನಂಬಿಕೆಯನ್ನು ದೇಶದ ಸೈನ್ಯದ ಮೇಲೆ ದೇಶದ ಜನತೆ ಇಟ್ಟಿದ್ದಾರೆ ಎಂದರು.ಮೈಸೂರಿನ ಪಕ್ಕದ ವಾಜಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವ ಬಗ್ಗೆ ಕೆಂಡಮಂಡಲರಾದ ಅವರು, ಈ ದೇಶಕ್ಕೆ ಮತ್ತು ಆಡಳಿತ ಯಂತ್ರಕ್ಕೆ ಒಂದೊಳ್ಳೆ ಕೊಡುಗೆ ಕೊಟ್ಟಂತಹ ವ್ಯಕ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ನಮ್ಮಂತ ಎಷ್ಟು ಜನರಿಗೆ ದೇವರಾಗಿರುವ ಅವರಿಗೆ ಅವಮಾನ ಮಾಡಿರುವ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿರಲಿ ಮತ್ತು ಯಾರೇ ತಪ್ಪಿತಸ್ಥರಾಗಿರಲಿ ಅವರನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ನಾನು ಗೃಹ ಮಂತ್ರಿ ಪರಮೇಶ್ವರ್ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.ಚಿಕ್ಕಬಳ್ಳಾಪುರದ ಈಶಾ ಟೆಂಪಲ್ ಸಾರ್ವಜನಿಕರ ನಿದ್ದೆಕೆಡಿಸಿದ್ದು, ದಿನ ಬೆಳಗಾದರೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಪ್ರವಾಸಿಗರು ಬರುತ್ತಿರುವುದರಿಂದ ವಾಹನದಟ್ಟಣೆ ಜಾಸ್ತಿಯಾಗಿದೆ ಎಂಬ ಕಾರಣಕ್ಕೆ ಅಪಘಾತಗಳು ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ನಾವು ಕಂಟ್ರೋಲ್ ಮಾಡಬಹುದು. ಅದನ್ನು ಯಾವ ರೀತಿ ಮಾಡಬಹುದು ಎನ್ನುವುದನ್ನು ಸೂಕ್ತ ಕ್ರಮಗಳನ್ನು ಅಧಿಕಾರಿಗಳೊಂದಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ನಾನು ತಿಳಿಸುತ್ತೇನೆ. ವಾಹನ ಸವಾರರು ಹೆದ್ದಾರಿಯಲ್ಲಿ ಸಂಚಾರ ಮಾಡುವಾಗ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡುತ್ತೇನೆ. ಒಂದು ವಿಚಾರ ಗಮನದಲ್ಲಿರಲಿ ಈ ಈಶಾ ಟೆಂಪಲ್ ನನ್ನ ಆಡಳಿತ ಅವಧಿಯಲ್ಲಿ ಆಗಿಲ್ಲ ಎಂಬುದು ತಿಳಿಸುತ್ತಿದ್ದೇನೆ ಎಂದು ತಿಳಿಸಿದರು.ನಗರದಲ್ಲಿ ಯುಜಿಡಿ ಸಮಸ್ಯೆ ಎದ್ದು ಕಾಣುತ್ತಿದ್ದು, ನಗರದ ಕೆಲ ಮನೆಗಳ ನೀರಿನ ತೊಟ್ಟಿಗಳಿಗೆ ಯುಜಿಡಿ ನೀರು ಸೇರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುವಂತಹ ಸಂದರ್ಭ ಒದಗಿಬರುತ್ತದೆ ಎಂದು ವಾರ್ಡಿನ ಜನ ಹೇಳಿದ್ದಾರೆ. ಯುಜಿಡಿಗೆ ಈಗಾಗಲೇ 27 ಕೋಟಿ ಅನುದಾನ ತಂದಿದ್ದು, ಅದಕ್ಕೆ ಮುಂದಿನ ಹಂತದಲ್ಲಿ ಇನ್ನು ಅನುದಾನ ತರಲು ಸರ್ಕಾರದ ಮೂರೆ ಹೋಗಿ ಸಮಸ್ಯೆಗೆ ಅಂತ್ಯ ಕಾಣಿಸುವ ಹಾಗೆ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಬೀದಿ ದೀಪಗಳನ್ನು ಕೇಳಿದ್ದಾರೆ. ಅದನ್ನು ಸಂಜೆಯ ಒಳಗಾಗಿ ಹಾಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಿದ್ಯುತ್ ಕಂಬ ತೆರವಿಗೆ ಮನವಿ ಮಾಡಿದ್ದಾರೆ. ಅದರ ತೆರವಿಗೆ ಕ್ರಮ ವಹಿಸಲು ಬೆಸ್ಕಾಂಗೆ ಸೂಚನೆ ನೀಡಿದ್ದೇನೆ. ಚರಂಡಿ ಬ್ಲಾಕ್ ಆಗಿದೆ, ಅದರ ತೆರವಿಗೆ ಕ್ರಮಕ್ಕೆ ಹಾಗೇ ಬೇರೆ ಕಡೆಯ ಜನ ಕಸ ತಂದು ಖಾಲಿ ಸೈಟ್‌ಗಳಲ್ಲಿ ಹಾಕುವುವರನ್ನು ಕಂಡು ಹಿಡಿಯಲು ಸಿಸಿ ಕ್ಯಾಮರಾ ಹಾಕಿ ಅವರಿಗೆ ದಂಡ ವಿಧಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.ಈ ವೇಳೆ ಈ ವೇಳೆ ಪೌರಾಯುಕ್ತ ಮನ್ಸೂರ್ ಆಲಿ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ವೆಂಕಟ್, ಪೆದ್ದನ್ನ, ರಮೇಶ್ ಬಾಬು, ಬಾಬಾಜಾನ್, ಮೋಲ್ಡ್ ವೆಂಕಟೇಶ್, ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.ಸಿಕೆಬಿ-3 ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ 8ನೇ ವಾರ್ಡ್‌ನ ಜನತೆಯ ಅಹವಾಲು ಆಲಿಸಿದರು.

Share this article