ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂತ ಸಾಧುಗಳ ಸಾಲಿನಲ್ಲಿ ನಿಂತು ಹಿಂದೂ ಜನಾಂಗಕ್ಕೆಲ್ಲಾ ದೇವರಾಗಿದ್ದ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯನ ಜಯಂತಿ ಈಗ ರಾಜಕೀಯ ದಾಳವಾಗುತ್ತಿದೆ. ಕೈವಾರ ತಾತಯ್ಯ ಜಯಂತಿ ವೇದಿಕೆ ಬಲಿಜ ಜನಾಂಗದ ಜಟಾಪಟಿಗೂ ಕಾರಣವಾಗಿದೆ. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿ ಯಾರು, ಏಕೆ ಎಂಬುದನ್ನು ಬಲಿಜ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಲಿಜ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ರವೀಂದ್ರ ಕಲಾಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಪಿ.ಸಿ. ಮೋಹನ್ ಭಾಷಣಗಳ ನಡುವೆ ಮೂಗು ತೂರಿಸಿದ ವ್ಯಕ್ತಿ ಯಾರು ಆತನ್ಯಾಕೆ ಶಾಸಕರ ಭಾಷಣಕ್ಕೆ ಅಡ್ಡಿಪಡಿಸಿದ ಎಂಬುದಕ್ಕೆ ಸ್ಪಷ್ಟನೆ ನೀಡಿದರು.ಮೋಹನ್ ಮಾಜಿ ಬೆಂಬಲಿಗ ಕಾರಣ
ಬಲಿಜ ಸಮುದಾಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಎಸ್.ಪಿ. ಶ್ರೀನಿವಾಸ್ ಮಾತನಾಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯನವರ ಜಯಂತಿಯಲ್ಲಿ ಬಾಗವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಆಗಲಿ ಸಂಸದ ಪಿ.ಸಿ.ಮೋಹನ್ ಆಗಲಿ ಕಲಹಕ್ಕೆ ಮುಂದಾಗಿರಲಿಲ್ಲ. ಆದರೆ ಮೋಹನ್ ಶಿಷ್ಯ ಎಂದು ಹೇಳಿಕೊಳ್ಳುವ ವ್ಯಕ್ತಿ ಸುರೇಶ್ ಎಂಬಾತ ಇಷ್ಟಕ್ಕೆಲ್ಲ ಕಾರಣ ಎಂದು ಆರೋಪಿಸಿದರು.ಸಂಸದ ಪಿ.ಸಿ.ಮೋಹನ್ ಅವರ ಬೆಂಬಲಿಗನಾಗಿದ್ದ ಸುರೇಶ್ ಒಮ್ಮೆ ಬಿಬಿಎಂಪಿ ಸದಸ್ಯ ಸ್ಥಾನಕ್ಕೂ ನಿಂತು ಸೋತಿದ್ದಾನೆ. ಈ ಬಾರಿ ಮೋಹನ್ ಅವರು ಸುರೇಶ್‌ಗೆ ಮತ್ತೆ ಟಿಕೇಟ್ ಕೊಡಿಸಲಿಲ್ಲ ಅನ್ನೋ ಕಾರಣಕ್ಕೆ ಅವರ ಮೇಲೆ ಸಿಟ್ಟಾಗಿದ್ದ. ಅದೆ ಧ್ವೇಷದಿಂದ ಕೈವಾರ ತಾತಯ್ಯ ಜಯಂತಿ ವೇಳೆ ಪಿ.ಸಿ.ಮೋಹನ್ ಮತ್ತು ಪ್ರದೀಪ್ ಈಶ್ವರ್ ನಡುವಿನ ಸಮುದಾಯದ ಒಗ್ಗಟ್ಟಿಗೆ ಹುಳಿ ಹಿಂಡಬೇಕು ಅನ್ನೋ ಕಾರಣಕ್ಕೆ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ವಾಸ್ತವವಾಗಿ ಸಂಸದರಾಗಲಿ ಶಾಸಕರಾಗಲಿ ಇಬ್ಬರೂ ಜನಾಂಗದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಪ್ರದೀಪ್ ಈಶ್ವರ್ ಮಾತನಾಡಿದ್ದರ ಪರವಾಗಿಯೇ ಪಿ.ಸಿ.ಮೋಹನ್ ಇದ್ದಾರೆ ಎಂದು ಸ್ಪಷ್ಟಿಕರಣ ನೀಡಿದರು.
ಪ್ರದೀಪ್ ಈಶ್ವರ್ ಕೈ ಬಲಪಡಿಸಿ ಪಿಎಲ್ ಡಿ ಬ್ಯಾಂಕ್ ನಾಮನಿರ್ದೇಶಕ ಸದಸ್ಯ ವೆಂಕಟನಾರಾಯಣಪ್ಪ ಮಾತನಾಡಿ, ಬಲಿಜ ಜನಾಂಗದ ಅನುಕೂಲಕ್ಕಾಗಿ 2ಎ ಮೀಸಲಾತಿ ತಂದೆ ತರುತ್ತೇನೆ ಎಂದು ಮುಂದಾಗಿರುವ ಶಾಸಕ ಪ್ರದೀಪ್ ಈಶ್ವರ್ ಅವರ ಕೈ ಬಲ ಪಡಿಸಬೇಕು. ಅವರಿಗೆ ಪ್ರೋತ್ಸಾಹಿಸಬೇಕಾಗಿದೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಕೆಲ ಕಿಡಿಗೇಡಿಗಳು ಶಾಸಕರ ಭಾಷಣದ ವೇಳೆ ಉದ್ದೇಶಪೂರ್ವಕವಾಗಿ ಅವರನ್ನು ಪ್ರಚೋದಿಸಲು ಮುಂದಾಗಿದ್ದು, ಭಾಷಣದಲ್ಲಿ ಅಡ್ಡಿಪಡಿಸಿದ್ದವರನ್ನು ಸಮಜಾಯಿಸಲು ಮುಂದಾಗಿಲ್ಲ ಎಂದರು.ಸಂಸದ- ಶಾಸಕರ ಮನಸ್ತಾಪ ಇಲ್ಲ
ಅಂದಿನ ಘಟನೆಯ ಕುರಿತು ಸಮುದಾಯದ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ಇನ್ನು ಅಂದಿನ ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ.ಮೋಹನ್ ಹಾಗು ಶಾಸಕ ಪ್ರದೀಪ್ ಈಶ್ವರ್ ನಡುವೆ ಯಾವುದೇ ರೀತಿಯ ಘಟನೆ ನಡೆದಿಲ್ಲ. ಇಬ್ಬರು ಬೇರೆ ಬೇರೆ ಪಕ್ಷದವರಾದರೂ ಜನಾಂಗದ ವಿಷಯ ಬಂದಾಗ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾರ್ಯಕ್ರಮದಲ್ಲಿ ಗದ್ದಲ ಸೃಷ್ಟಿಸಿದ್ದು ಇದಕ್ಕೆ ಯಾರೂ ಕಿವಿಕೂಡದೆ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ಜೋಳದ ಕಿಟ್ಟಿ, ರಾಜು ಮತ್ತಿತರರು ಇದ್ದರು.