ಚಳ್ಳಕೆರೆ: ಸುಮಾರು ೫೬ ವರ್ಷಗಳ ನಂತರ ತುಂಬಿ ಹರಿದ ನಾಯಕನಹಟ್ಟಿ ರಸ್ತೆಯಲ್ಲಿರುವ ಕರೇಕಲ್ ಕೆರೆಗೆ ಶುಕ್ರವಾರ ಕ್ಷೇತ್ರದ ಶಾಸಕ, ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಈಗಾಗಲೇ ಈ ಕ್ಷೇತ್ರದ ಶಾಸಕನಾಗಿ ೧೨ ವರ್ಷದಲ್ಲಿ ಕಾಲಿಟ್ಟಿದ್ದು, ಇದೇ ಮೊದಲ ಬಾರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನನ್ನಪಾಲಿಗೆ ಬಂದಿದ್ದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಕರೇಕಲ್ ಕೆರೆ ವಿಶಾಲವಾಗಿದ್ದು, ಅಷ್ಟೇ ಆಳವಾಗಿದೆ. ಈ ಕೆರೆ ಕಳೆದ ನೂರಾರು ವರ್ಷಗಳಿಂದ ಈ ಭಾಗದ ಜನರ ಜೀವನಾಡಿಯಾಗಿದೆ. ಎಲ್ಲರೂ ಕರೇಕಲ್ ಕೆರೆ ಮತ್ತು ಅಜ್ಜಯ್ಯನಗುಡಿ ಕೆರೆಯನ್ನು ಮನತುಂಬಿ ಕರೆಯುತ್ತಾರೆ. ಅಜ್ಜಯ್ಯಗುಡಿಕೆರೆ ಸಹ ತುಂಬಿ ಕೋಡಿಬಿದ್ದಿದೆ. ನನ್ನ ಕ್ಷೇತ್ರದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಕೆರೆಗಳು ಕೋಡಿಭಾಗ್ಯಕಂಡಿವೆ ಎಂದರು. ಇನ್ನೂ ಮಳೆ ಇದ್ದು, ಸಾರ್ವಜನಿಕರು, ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ಮಾತನಾಡಿ, ಈ ಭಾಗದ ನಗರಸಭಾ ಸದಸ್ಯನಾಗಿ ಆರು ವರ್ಷ ಕಳೆದಿದ್ದು, ಇದೇ ಮೊದಲಬಾರಿಗೆ ಕರೇಕಲ್ ಕೆರೆ ಕೋಡಿಬಿದ್ದಿದೆ. ಕೋಡಿಬಿದ್ದ ಕೂಡಲೇ ಈ ಭಾಗದ ಜನರ ಹರ್ಷ ಮುಗಿಲು ಮುಟ್ಟಿತ್ತು. ತುಂಬಿದ ಗಂಗಾಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ಹಮ್ಮಿಕೊಂಡಿದ್ದು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ ಎಂದರು.
ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಕವಿತಾ, ಸುಮಾ, ರಾಘವೇಂದ್ರ, ರಮೇಶ್‌ಗೌಡ, ನಾಮನಿರ್ದೇಶನ ಸದಸ್ಯ ಬಡಗಿಪಾಪಣ್ಣ, ಮುಖಂಡರಾದ ವೀರೇಶ್, ಕೃಷ್ಣಮೂರ್ತಿ, ಪ್ರಹ್ಲಾದ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.