ಅಧಿವೇಶನದಲ್ಲಿ ಇಂಡಿ ಸಮಸ್ಯೆಗೆ ಧ್ವನಿಯಾದ ಶಾಸಕ

KannadaprabhaNewsNetwork |  
Published : Dec 11, 2025, 03:15 AM IST
ಇಂಡಿ | Kannada Prabha

ಸಾರಾಂಶ

ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಇಂಡಿ ಪಟ್ಟಣದಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಸ್ಥಾಪನೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಕಾನೂನು ಸಚಿವ ಎಚ್.ಕೆ ಪಾಟೀಲ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಇಂಡಿ

ಅಖಂಡ ಇಂಡಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರು, ರೈತರು ಹಾಗೂ ನ್ಯಾಯವಾದಿಗಳ ಹಿತದೃಷ್ಟಿಯಿಂದ ಮತ್ತು ಇಂಡಿ ನಗರವು ಮುಂಬರುವ ದಿನಗಳಲ್ಲಿ ಹೊಸದಾಗಿ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಹೀಗಾಗಿ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಇಂಡಿ ಪಟ್ಟಣದಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಸ್ಥಾಪನೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಕಾನೂನು ಸಚಿವ ಎಚ್.ಕೆ ಪಾಟೀಲ ಗಮನ ಸೆಳೆದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಶಾಸಕರು, ಕಂದಾಯ ಉಪ ವಿಭಾಗ ಹಾಗೂ ತಾಲೂಕು ಕೇಂದ್ರವಾಗಿರುವ ಇಂಡಿ ನಗರದಲ್ಲಿ 1962ರಲ್ಲಿ ನ್ಯಾಯಾಲಯ ಸ್ಥಾಪನೆಯಾಗಿದೆ. ಇಲ್ಲಿಯವರೆಗೂ ಕೇವಲ ಕಿರಿಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಮಾತ್ರ ಇದೆ. ಚಡಚಣ, ಇಂಡಿ, ಸಿಂದಗಿ ತಾಲೂಕುಗಳು ಉಪ ವಿಭಾಗ ಹೊಂದಿದ್ದು, ಸುಮಾರು 120 ಕಿಮೀ ವ್ಯಾಪ್ತಿ ಹೊಂದಿದೆ. ಸುಮಾರು 50 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹೊಂದಿದ್ದು, ಈ ಭಾಗದ ಕೂಲಿ ಕಾರ್ಮಿಕರು, ರೈತರು ಪರಿಹಾರ ಧನಕ್ಕಾಗಿ ದೂರದ ವಿಜಯಪುರಕ್ಕೆ ಹೋಗಬೇಕಾಗುತ್ತದೆ. ವಿಜಯಪುರ ನ್ಯಾಯಾಲಯದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳು ವಿಳಂಬವಾಗುತ್ತಿರುವ ಮಾಹಿತಿಯಿದ್ದು ಹೀಗಾಗಿ ಇಂಡಿ ನಗರದಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಸ್ಥಾಪಿಸುವಂತೆ ಗಮನ ಸೆಳೆದರು.

ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ ಪಾಟೀಲ, ಚಡಚಣ ತಾಲೂಕು ಒಳಗೊಂಡಂತೆ ವಿಜಯಪುರ ಜಿಲ್ಲೆಯಲ್ಲಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಸ್ಥಾಪಿಸುವ ಕುರಿತು ಕರ್ನಾಟಕದ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರಿಂದ ಪ್ರಸ್ತಾವನೆ ಸ್ವೀಕೃತವಾಗಿದೆ. ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉತ್ತರಿಸಿದ್ದಾರೆ.

ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹ:

ಒಳಾಂಗಣ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಪ್ರತಿಭೆಗಳಿಗೆ ಉತ್ತೇಜನ ನೀಡಲು ಇಂಡಿ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಅವಶ್ಯವಿರುವ ಸರ್ಕಾರಿ ಜಮೀನು ಲಭ್ಯ ಇರುವುದರಿಂದ ನಗರದಲ್ಲಿ ಹೊಸದಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರ ಆಸಕ್ತಿ ಹೊಂದಿದೆಯೇ ಎಂಬುವ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇಂಡಿ ಪಟ್ಟಣದಲ್ಲಿ ಸೂಕ್ತ ನಿವೇಶನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವಾದ ನಂತರ ಅನುದಾನದ ಲಭ್ಯತೆ ಆಧರಿಸಿ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಪರಿಗಣಿಸಲಾಗುವುದು 2025-26ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆಯಂತೆ ನಿವೇಶನ ಲಭ್ಯ ಇರುವ 12 ತಾಲೂಕು ಕೇಂದ್ರಗಳಲ್ಲಿ ತಲಾ ₹2 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಉತ್ತರಿಸಿದರು.

ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ 3 ಹಂತದ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಸಂಪೂರ್ಣಗೊಳಿಸಿ ರೈತರ ಜಮೀನಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ 1, 2 ಮತ್ತು 3 ನೇ ಹಂತಗಳ ಯೋಜನೆಗೆ ಮಂಜೂರಾತಿ ದೊರೆತಿದ್ದು ಯಾವಾಗ, 1 ನೇ ಹಂತದ ಕಾಮಗಾರಿ ಯಾವ ನಿಗದಿತ ಸಮಯದೊಳಗೆ ಸಂಪೂರ್ಣಗೊಳಿಸಬೇಕಿದೆ. 2ನೇ ಹಾಗೂ 3ನೇ ಹಂತದ ಕಾಮಗಾರಿಯು ಯಾವ ಹಂತದಲ್ಲಿದೆ. ಯೋಜನೆಯ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿದ್ದು, ಇದುವರೆಗೂ ಕಾಮಗಾರಿ ಪ್ರಾರಂಭಿಸದಿರಲು ಕಾರಣದ ಕುರಿತು ವಿವರ ನೀಡುವ ಕುರಿತು ಶಾಸಕ ಪಾಟೀಲ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ₹2638 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು 3 ಹಂತಗಳಲ್ಲಿ ಕೈಗೊಳ್ಳಲು 2022ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಈ ಯೋಜನೆಯ 3 ಹಂತದ ಕಾಮಗಾರಿಗಳ ಗುತ್ತಿಗೆದಾರರಿಗೆ ನಿಗದಿಪಡಿಸಿದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಅವಶ್ಯವಿರುವ ಜಮೀನುಗಳ ಭೂಸ್ವಾಧಿನಕ್ಕಾಗಿ ಪ್ರಸ್ತಾವನೆಗಳನ್ನು ಸಂಬಂದಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ, ಭೂಸ್ವಾಧಿನ‌ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳನ್ನು ನಿಯೋಜಿಸಿಕೊಂಡು ಭೂಸ್ವಾಧಿನ ಪ್ರಕ್ರಿಯೆಯೊಂದಿಗೆ ಕಾಮಗಾರಿ ಪೂರ್ಣಗೊಳಿಸಿ 28 ಸಾವಿರ ಹೆಕ್ಟೇರ್‌ ಪ್ರದೇಶದ ರೈತರ ಜಮೀನಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ