ದೊಡ್ಡಬಳ್ಳಾಪುರ: ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಶಿಷ್ಟಾಚಾರ ಸಮರ ತಾರಕಕ್ಕೇರಿದೆ. ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಡಿಪಿಎ ಅಧ್ಯಕ್ಷ ಸ್ಥಾನ ಶಿಷ್ಟಾಚಾರಕ್ಕೆ ಒಳಪಡುವುದಿಲ್ಲ ಎಂದು ಹೇಳಿರುವ ಶಾಸಕ ಧೀರಜ್ ಮುನಿರಾಜ್ ಅವರಿಗೆ ಯೋಜನಾ ಪ್ರಾಧಿಕಾರದ ಕಾನೂನು ಹಾಗೂ ಶಿಷ್ಟಾಚಾರದ ಬಗ್ಗೆ ಅರಿವು ಇಲ್ಲ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಟೀಕಿಸಿದ್ದಾರೆ.
ತಾವು ಯಾವುದೇ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿಲ್ಲ. ತಾಲೂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದನ್ನು ಬಿಜೆಪಿ-ಜೆಡಿಎಸ್ ಸಹಿಸುತ್ತಿಲ್ಲ. ಚುನಾವಣೆಯಲ್ಲಿ ಸೋತಿದ್ದರೂ ಜನರ ನಡುವೆಯೇ ಇದ್ದೇನೆ. ತಮ್ಮ ಸುದೀರ್ಘ ರಾಜಕೀಯ ಅನುಭವ ಹಾಗೂ ಜನಸೇವೆಯನ್ನು ಗುರುತಿಸಿ ಸರ್ಕಾರ ಡಿಪಿಎ ಅಧ್ಯಕ್ಷ ಸ್ಥಾನ ನೀಡಿದೆ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಲಿಖಿತ ದೂರು ಸಲ್ಲಿಸಲಾಗಿದೆ. ಡಿಪಿಎಆರ್‌ನ ಶಿಷ್ಟಾಚಾರ ವಿಭಾಗಕ್ಕೂ ದೂರು ಸಲ್ಲಿಸಲಾಗುವುದು ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಮುಖಂಡರಾದ ಅಖಿಲೇಶ್, ಚುಂಚೇಗೌಡ, ಕೆ.ಪಿ.ಜಗನ್ನಾಥ್, ಬೈರೇಗೌಡ, ಬಿ.ಜಿ.ಹೇಮಂತರಾಜು, ಕೆ.ಎಂ.ಕೃಷ್ಣಮೂರ್ತಿ, ರವಿಕುಮಾರ್, ಶರತ್ ಪಟೇಲ್, ಎಚ್.ಎಸ್.ಶಿವಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.