ರೈತರಿಗೆ ಶೇಂಗಾ ಬೆಳೆವಿಮೆ ಕೊಡಿಸಲು ಆಯುಕ್ತರಿಗೆ ಶಾಸಕರ ಪತ್ರ

KannadaprabhaNewsNetwork |  
Published : Apr 07, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ   ಬಾಟಂ  | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ಸೇಂಗಾ ಬೆಳೆಗಾರರು ಶಾಸಕ ಟಿ.ರಘುಮೂರ್ತಿ ಅವರನ್ನು ಭೇಟಿ ಮಾಡಿ ಸೇಂಗಾ ಬೆಳೆ ನಷ್ಟ ಪರಿಹಾರ ದೊಕರಿಸಿಕೊಡುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ತಾಲೂಕಿನ ಶೇಂಗಾ ಬೆಳೆಗಾರರು ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ನಷ್ಟವಾದ ರೈತರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಇದೀಗ ಶಾಸಕ ಟಿ.ರಘುಮೂರ್ತಿ ಮಧ್ಯಪ್ರವೇಶ ಮಾಡಿದ್ದಾರೆ. ಪ್ರೀಮಿಯಂ ಕಟ್ಟಿಸಿಕೊಂಡ ರೈತರಿಗೆ ವಿಮೆ ವಿತರಿಸದೇ ಸತಾಯಿಸುತ್ತಿರುವ ಕಂಪನಿಯ ನಿರ್ಲಕ್ಷ್ಯ ಧೋರಣೆಗೆ ಶಾಸಕರೇ ರೋಸಿ ಹೋಗಿ ಇದೀಗ ಕೃಷಿ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ರೈತರ ಸಂಕಷ್ಟಕ್ಕೆ ಶಾಸಕರೇ ಈಗ ನೇರ ಅಖಾಡಕ್ಕೆ ಇಳಿದಿದ್ದಾರೆ.ಬೆಳೆ ನಷ್ಟವಾಗಿರುವ ಕುರಿತು ಇಲಾಖೆ ನೀಡಿರುವ ವರದಿ ಇದ್ದರೂ ವಿಮೆ ಕಟ್ಟಿರುವ ರೈತರನ್ನು ಸತಾಯಿಸುತ್ತಿರುವ ವಿಮಾ ಕಂಪನಿಗಳ ವಿಳಂಬ ನೀತಿಗೆ ಕೃಷಿ ಇಲಾಖೆ ಆಯುಕ್ತರಿಗೆ ಪತ್ರದ ಮೂಲಕ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವಿಮೆಗೆ ಸಂಬಂಧಿಸಿದಂತೆ ಹಲವು ರೈತ ಸಂಘಟನೆಗಳು ಕಳೆದ ಎರಡು ತಿಂಗಳಿನಿಂದ ಶಾಸಕರು, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರ ಮುಂದೆ ತಮ್ಮ ಗೋಳು ತೋಡಿಕೊಂಡು ರೈತರಿಗೆ ವಿಮಾ ಕಂಪನಿಗಳು ತೋರುತ್ತಿರುವ ಬೇಜವಾಬ್ದಾರಿ ನಡೆಯ ಕುರಿತು ಹಲವು ಮನವಿ ಮಾಡಿದ್ದರು.

ಈ ಸಂಬಂಧ ಭಾನುವಾರ ಶಾಸಕರನ್ನು ಭೇಟಿ ಮಾಡಿದ ತಾಲೂಕಿನ ಕಸಬಾ ಹೋಬಳಿಯ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಶೇಂಗಾ ವಿಮೆ ವಿತರಣೆಯ ವಿಳಂಬದ ಕುರಿತು ಗಮನ ಸೆಳೆದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಶಾಸಕರು ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಕೊನೆಗೆ ಈ ಕುರಿತು ಕೃಷಿ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವುದಾಗಿ ರೈತರಿಗೆ ಭರವಸೆ ನೀಡಿದರು. ಅದರಂತೆ ಒಂದು ಗಂಟೆಯ ಒಳಗಾಗಿ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ.

ಶೇಂಗಾ ಬೆಳೆಗಾರರು ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ನಷ್ಟವಾಗಿದೆ. ಸುಮಾರು 36,766 ರೈತರು ಪ್ರೀಮಿಯಂ ಕಟ್ಟಿದ್ದಾರೆ. ಆದರೆ, ವಿಮಾ ಕಂಪನಿ ಇದೀಗ ವಿಳಂಬ ಧೋರಣೆ ತಳೆಯುತ್ತಿದೆ. ಕಾಲಕ್ಕೆ ಸರಿಯಾಗಿ ಮಳೆ ಬಾರದ ಹಿನ್ನೆಲೆ ಬೆಂಕಿ ರೋಗ, ಕರೆ ಜಾಡಿ, ರೋಗಗಳಿಗೆ ಬಲಿಯಾಗಿ ಹಾಕಿದ ಶೇಂಗಾ ಬೆಳೆ ನಷ್ಟವಾಗಿದೆ. ತಾಲೂಕಿನ ಸುಮಾರು 40 ಗ್ರಾಪಂಗಳ ವ್ಯಾಪ್ತಿಯಲ್ಲಿ 1,14,900ಎಕರೆ ಶೇಂಗಾ ಬೆಳೆಗೆ 36,766ರೈತರು ವಿಮೆ ಪಾವತಿಸಿದ್ದಾರೆ.

ರೈತರಿಗೆ ವಿಮಾ ಕಂಪನಿ ದ್ರೋಹವೆಸಗುತ್ತಿರುವುದು ಸರಿಯಾದ ನಡೆಯಲ್ಲ. ಈ ಕೂಡಲೇ ಒಂದು ವಾರದ ಒಳಗಾಗಿ ವಿಮೆ ಕಟ್ಟಿರುವ ರೈತರಿಗೆ ಹಣ ಸಂದಾಯವಾಗಬೇಕು. ಕೂಡಲೇ ಕ್ರಮಕೈಗೊಂಡು ವಿಮೆ ಹಣ ಕೊಡಿಸಿಕೊಡಬೇಕು ಎಂದು ಕೃಷಿ ಇಲಾಖೆ ಆಯುಕ್ತರಿಗೆ ಶಾಸಕ ಟಿ.ರಘುಮೂರ್ತಿ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆಯೂ ಕೂಡ ಅಂದರೆ ಕಳೆದು ಒಂದೂವರೆ ತಿಂಗಳ ಹಿಂದೆ ತೊಗರಿ ಬೆಳೆಗಾರರಿಗೂ ಮಧ್ಯಂತರ ಪರಿಹಾರ ಕೊಡಿಸುವಲ್ಲಿ ಶಾಸಕರ ಶ್ರಮವಿತ್ತು ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ‌‌.ಶಿವಲಿಂಗಪ್ಪ ಹೇಳಿದರು.ತೊಗರಿ ಬೆಳೆಗಾರರಿಗೆ ಮಧ್ಯಂತರ ವಿಮೆ ತರಲು ಸೆಣಸಾಡಿದ ತೊಗರಿ ಬೆಳೆಗಾರರ ಸಂಘದವರು ಕೃಷಿ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಮಂತ್ರಿ, ಶಾಸಕರು ಹೀಗೇ ಎಲ್ಲರ ಹತ್ತಿರ ಸಂಕಷ್ಟ ಹೇಳಿ ಪಡಬಾರದ ಪಾಡು ಪಟ್ಟು ಮಧ್ಯಂತರ ವಿಮೆ ದಕ್ಕಿಸಿಕೊಂಡಿದ್ದರು.

ಚಳ್ಳಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಬೆಳೆಯುವ ರೈತರು ಶಾಸಕರ ಬರೆದ ಪತ್ರದ ಮೇಲೆ ವಾರದೊಳಗೆ ವಿಮೆ ಬಂದೀತೆ ಎಂಬ ನಿರೀಕ್ಷೆಯಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರ ಕಡಿದು ಮಹಿಳಾ ಕಾಲೇಜು ಕಟ್ಟಲು ಅವಕಾಶ ಕೊಡಲ್ಲ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದಕ್ಕೆ ಹೆಮ್ಮೆಪಡಿ