ಹೇಮಾವತಿ ಬಡಾವಣೆಯ 582 ನಿವೇಶನಗಳ ಅಕ್ರಮ-ಸಕ್ರಮ ಬಗ್ಗೆ ಶಾಸಕ ಪ್ರಸ್ತಾಪ

KannadaprabhaNewsNetwork | Published : Jul 24, 2024 12:17 AM

ಸಾರಾಂಶ

ನಿವೇಶನ ಹಂಚಿಕೆ ವೇಳೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ನಿವೇಶನದಾರರಿಂದ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಖಾತೆ ಮಾಡಿಕೊಡಲಾಗಿದೆ. ಬಡಾವಣೆ ಶೇ.90 ರಷ್ಟು ಜನ ಈಗಾಗಲೇ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕೆಲವರು ಮಾರಾಟ ಮಾಡಿದ್ದು ಎರಡು-ಮೂರು ಕೈ ಬದಲಾವಣೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಹೇಮಾವತಿ ಬಡಾವಣೆಯ 582 ನಿವೇಶನಗಳ ಅಕ್ರಮ-ಸಕ್ರಮದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಚ್.ಟಿ.ಮಂಜು ವಿಷಯ ಪ್ರಸ್ತಾಪಿಸಿದಾಗ ರಾಜ್ಯ ಪೌರಾಡಳಿತ ಸಚಿವರು ಸಕಾರಾತ್ಮಕ ಉತ್ತರ ನೀಡಿದ್ದಾರೆ.ಸದನದಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಪತ್ರಿಕೆಗೆ ನೀಡಿರುವ ಶಾಸಕರು, ಹೇಮಾವತಿ ಬಡಾವಣೆಯ 582 ನಿವೇಶನದಾರರ ಸಂಕಷ್ಟ ಪರಿಹಾರಕ್ಕೆ ಸಮಸ್ಯೆಯನ್ನು ಎಳೆಎಳೆಯಾಗಿ ಸದನದ ಮುಂದಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಪಟ್ಟಣದ ಪುರಸಭೆ 1977ರ ಜೂ.23 ರಂದು 51.30 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು 1984ರ ಜೂ.16 ರಲ್ಲಿ ವಸತಿ ವಿನ್ಯಾಸ ನಕ್ಷೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಂಡಿದೆ. ನಂತರ ವಿವಿಧ ಅವಧಿಗಳಲ್ಲಿ ಅಧ್ಯಕ್ಷರಾಗಿದ್ದವರು ಮತ್ತು ಅಧಿಕಾರಿಗಳು ಮಾಡಿದ ಸಣ್ಣಪುಟ್ಟ ವತ್ಯಾಸಗಳಿಂದ ನಿವೇಶನ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿವೇಶನ ಹಂಚಿಕೆ ವೇಳೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ನಿವೇಶನದಾರರಿಂದ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಖಾತೆ ಮಾಡಿಕೊಡಲಾಗಿದೆ. ಬಡಾವಣೆ ಶೇ.90 ರಷ್ಟು ಜನ ಈಗಾಗಲೇ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕೆಲವರು ಮಾರಾಟ ಮಾಡಿದ್ದು ಎರಡು-ಮೂರು ಕೈ ಬದಲಾವಣೆಯಾಗಿದೆ.

ಗ್ರಾಮೀಣ ಪ್ರದೇಶದ ರೈತರು ತಮ್ಮ ಹೊಲ ಮನೆಗಳನ್ನು ಮಾರಿ ತಮ್ಮ ಜೀವಿತಾವಧಿಯ ದುಡಿಮೆಯಿಂದ ಇಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಈಗ ಇವರು ಎಲ್ಲಿ ಹೋಗಬೇಕು ಎಂದು ಸದನದಲ್ಲಿ ಪ್ರಶ್ನಿಸಿದ ಶಾಸಕ ಎಚ್.ಟಿ.ಮಂಜು ಸಕ್ರಮವಾಗದೆ ಉಳಿದಿರುವ 582 ನಿವೇಶನಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿದರು.

ಶಾಸಕರ ಪ್ರಶ್ನೆಗೆ ಸದನದಲ್ಲಿಯೇ ಉತ್ತರಿಸಿದ ರಾಜ್ಯ ಪೌರಾಡಳಿತ ಸಚಿವ ರಹೀಂಖಾನ್ ಇದು 40 ವರ್ಷಗಳ ಸಮಸ್ಯೆ. ಇದರ ಬಗ್ಗೆ ಲೋಕಾಯುಕ್ತ ತನಿಖಾ ವರದಿ ಬಂದಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಸಕ ಎಚ್.ಟಿ.ಮಂಜು ಅವರೊಂದಿಗೆ ಮಾತನಾಡಿ ಅಂತಿಮಗೊಳಿಸುವ ಭರವಸೆ ನೀಡಿದರು.

Share this article