ರೈತರು, ದೇಶ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದ ಬಜೆಟ್: ಸಿದ್ದೇಶ್ವರ

KannadaprabhaNewsNetwork | Published : Jul 24, 2024 12:17 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಅಭಿವೃದ್ಧಿ ಭಾರತದ ಸಂಕಲ್ಪವನ್ನು ಪ್ರಸ್ತಾಪಿಸಲಾಗಿದೆ. ರೈತರು, ದೇಶದ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದ ಬಜೆಟ್ ಇದಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಸ್ವಾಗತಿಸಿದ್ದಾರೆ.

- ಮೋದಿ ಸರ್ಕಾರದ ಬಜೆಟ್‌ಗೆ ಕೇಂದ್ರದ ಮಾಜಿ ಸಚಿವ ಸ್ವಾಗತ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಅಭಿವೃದ್ಧಿ ಭಾರತದ ಸಂಕಲ್ಪವನ್ನು ಪ್ರಸ್ತಾಪಿಸಲಾಗಿದೆ. ರೈತರು, ದೇಶದ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದ ಬಜೆಟ್ ಇದಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಸ್ವಾಗತಿಸಿದ್ದಾರೆ.

ಅಭಿವೃದ್ಧಿ ಭಾರತದ ಸಂಕಲ್ಪವನ್ನು ಪ್ರಸ್ತಾಪಿಸುವ ಕೇಂದ್ರ ಬಜೆಟ್ ಇದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ 7ನೇ ಬಾರಿಗೆ ಮಂಡಿಸಿದ ಬಜೆಟ್‌ನಲ್ಲಿ 9 ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಬಡವರು, ಮಹಿಳೆಯರು, ಯುವಕರು, ರೈತರು, ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದ ಬಜೆಟ್ ಎಂದು ತಿಳಿಸಿದ್ದಾರೆ.

ವಿಶೇಷವಾಗಿ ಬಜೆಟ್‌ನಲ್ಲಿ ₹1.52 ಲಕ್ಷ ಕೋಟಿ ಅನುದಾನವನ್ನು ಕೃಷಿ ಕ್ಷೇತ್ರಕ್ಕೆಂದೇ ಮೀಸಲಿಡಲಾಗಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಲಾಗಿದೆ. ಉದ್ಯೋಗ ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ₹1.48 ಲಕ್ಷ ಕೋಟಿ ಮೀಸಲಿಡಲಾಗಿದೆ. 1 ಸಾವಿರ ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ, 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ಸಹ ಒಳ್ಳೆಯ ಕಾರ್ಯ ಎಂದು ಹೇಳಿದ್ದಾರೆ.

ಸುಮಾರು 500 ಟಾಪ್ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ಗೆ ಅವಕಾಶ, ಮಹಿಳಾ ಸಬಲೀಕರಣಕ್ಕೆ ಲಕ್‌ಪತಿ ದೀದಿ ಯೋಜನೆಯಡಿ ₹3 ಲಕ್ಷ ಕೋಟಿಗಳನ್ನು ಮೀಸಲಿಡಲಾಗಿದೆ. ನಗರ, ಗ್ರಾಮೀಣ ಭಾಗಗಳಲ್ಲಿ ₹3 ಕೋಟಿ ವಸತಿ ನಿರ್ಮಾಣ, ಮುದ್ರಾ ಯೋಜನೆಯಡಿ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ ಉತ್ತಮ ಕೆಲಸ. ಪ್ರಧಾನಮಂತ್ರಿ ಸೂರ್ಯ ಘರ್‌ ಮುಫ್ತ್ ಬಿಜಿಲಿ ಯೋಜನೆಯಡಿ 300 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಘೋಷಣೆ ಸಹ ಒಳ್ಳೆಯ ಬೆಳವಣಿಗೆ ಎಂದು ಸಿದ್ದೇಶ್ವರ್‌ ಶ್ಲಾಘಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸರ್ಕಾರಿ ನೌಕರರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ಇನ್ನೂ ಹಲವಾರು ಯೋಜನೆಗಳನ್ನು ಪ್ರಕಟಿಸುವ ಮೂಲಕ ಸಮೃದ್ಧ ಹಾಗೂ ಬಲಶಾಲಿ ಅಭಿವೃದ್ಧಿ ಭಾರತದ ಸಂಕಲ್ಪವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಚೊಚ್ಚಲ ಬಜೆಟ್‌ ಅಂಶಗಳು ಸ್ವಾಗತಾರ್ಹವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- - - -23ಕೆಡಿವಿಜಿ2: ಜಿ.ಎಂ.ಸಿದ್ದೇಶ್ವರ, ಮಾಜಿ ಸಂಸದ.

Share this article