ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಸುಮಾರು 2.5 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕರು, ಕುಂಬಳಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ 15 ಲಕ್ಷ, ಮುಗಳಿಪುರ ಗ್ರಾಮದಲ್ಲಿ 10 ಲಕ್ಷ, ಶಂಕಣಿಪುರ ಗ್ರಾಮದಲ್ಲಿ 35 ಲಕ್ಷ, ಆಲಪ್ಪನಹಳ್ಳಿ ಗ್ರಾಮದಲ್ಲಿ 45 ಲಕ್ಷ, ಉಪ್ಪಾರಹಳ್ಳಿ ಗ್ರಾಮದಲ್ಲಿ 10 ಲಕ್ಷ, ಕುಂಬಳಹಳ್ಳಿ ಗ್ರಾಮದಲ್ಲಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ , ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಒಟ್ಟು 2.5 ಕೋಟಿಗೂ ಅಧಿಕ ಅನುದಾನವನ್ನು ಕುಂಬಳಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ತ್ವರಿತವಾಗಿ, ಗುಣಮಟ್ಟದಿಂದ ಮಾಡಬೇಕು. ಗ್ರಾಮಗಳಲ್ಲಿ ಸ್ಥಳೀಯರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಗ್ರಾಪಂ ಅಧ್ಯಕ್ಷೆ ಬಿಂದೂ ಅಶೋಕ್, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ಹೊಸಕೋಟೆ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಬೈರೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಅಲಪ್ಪನಹಳ್ಳಿ ಸತೀಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಲಕ್ಕೊಂಡಹಳ್ಳಿ ಡೇರಿ ಅಧ್ಯಕ್ಷ ಎಲ್.ಎಂ.ಮಂಜುನಾಥ್ ಸೇರಿ ಹಲವು ಗಣ್ಯರು ಹಾಜರಿದ್ದರು.ನಂದಗುಡಿ ಟೌನ್‌ಶಿಪ್ ಗೆ ಸರ್ವೇ ಅಧಿಕಾರಿಗಳು ಹೋಗಿಲ್ಲ:
ಕೇಂದ್ರ ಸರ್ಕಾರದಿಂದ ಡ್ರೋನ್ ಸರ್ವೇ ಮೂಲಕ ಆಸ್ತಿಗಳ ಗಡಿ ಗುರುತಿಸುವ ಕಾರ್ಯ ನಡೆಯುತ್ತಿದ್ದು, ನಂದಗುಡಿ ಹೋಬಳಿಯ ಇಟ್ಟಸಚಿದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರಕ್ಕೆ ಏರಿಯಲ್ ಸರ್ವೇಗೆ ಅಧಿಕಾರಿಗಳು ಡ್ರೋನ್ ತೆಗೆದುಕೊಂಡು ಹೋದಾಗ ಅಲ್ಲಿನ ರೈತರು ಟೌನ್‌ಶಿಪ್‌ಗೆ ಭೂಮಿ ಸರ್ವೇ ಮಾಡಲು ಬಂದಿದ್ದಾರೆ ಎಂದು ತಪ್ಪು ತಿಳಿದುಕೊಂಡು ಸ್ಥಳದಲ್ಲಿ ಗೊಂದಲ ಸೃಷ್ಟಿಸಿದ್ದರು, ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ರೈತರು ಆತಂಕ ಪಡುವ ಅಗತ್ಯತೆ ಇಲ್ಲ. ಇದು ತಾಲೂಕಿನಾದ್ಯಂತ ಆಗುವ ಕೆಲಸ ಎಂದು ಸ್ಪಷ್ಟನೆ ನೀಡಿದ ಮೇಲೆ ರೈತರು ಸುಮ್ಮನಾಗಿದ್ದಾರೆ. ಆದ್ದರಿಂದ ಟೌನ್‌ಶಿಪ್‌ಗೂ ಡ್ರೋನ್ ಸರ್ವೇಗೂ ಸಂಬಂಧವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದರು.