ಬಳ್ಳಾರಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದೆ. ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಜಯನಗರ- ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎನ್.ಎಸ್. ಬೋಸರಾಜು, ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ₹2.5 ಕೋಟಿ ಅನುದಾನ ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಪ್ತಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಕ ಹಾಗೂ ಇನ್ನಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು.
ಈ ಯೋಜನೆಯ ವ್ಯಾಪ್ತಿಯಲ್ಲಿ ಶಿಗೇನಹಳ್ಳಿ 1, 2, 3, ತಂಬ್ರಹಳ್ಳಿ, ತಂಬ್ರಹಳ್ಳಿ ಎಕ್ಸ್‍ಟೆನ್ಶನ್ ಪ್ರದೇಶ, ಕೃಷ್ಣಾಪುರ, ಚಿಲಗೋಡು ಇನ್ನಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂಧು ಉತ್ತರಿಸಿದರು.ವೈ.ಎಂ.ಸತೀಶ್ ಮಾತನಾಡಿ, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆಗಳನ್ನು ಸದನದಲ್ಲಿ ಕೇಳಿದ್ದೆ. ಆಗ, ಸಚಿವರಾಗಿದ್ದ ಮಾಧುಸ್ವಾಮಿ, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ನೆರವಾಗಬೇಕು. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು.
ಲೆಕ್ಕಾಚಾರ ಹಾಕಿ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಬಜೆಟ್‍ನಲ್ಲಿ ಈ ವಿಷಯ ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಸಚಿವ ಎನ್.ಎಸ್. ಬೋಸರಾಜ್ ಉತ್ತರಿಸಿದರು.