ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಪರಿಶೀಲಿಸಿದ ಶಾಸಕ ಸವದಿ

KannadaprabhaNewsNetwork | Published : Sep 1, 2024 1:46 AM

ರಾಜ್ಯದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಒಂದಾದ ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಐಗಳಿ ಕ್ರಾಸ್ ಬಳಿ ಕೆಲಸ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಒಂದಾದ ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಐಗಿಳಿ ಕ್ರಾಸ್ ಬಳಿ ಕೆಲಸ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಪರಿಶೀಲಿಸಿದರು.

ಕೆಲಸದ ಬಗ್ಗೆ ಅಥಣಿ ನೀರಾವರಿ ಇಲಾಖೆ ಮುಖ್ಯ ಎಂಜನಿಯರ್‌ ಪ್ರವೀಣ ಹುಣಸಿಕಟ್ಟಿ ಕಾಮಗಾರಿಯ ಸಮಗ್ರ ವಿವರಣೆ ನೀಡಿದರು. ಸದ್ಯ ಸ್ಥಳದಲ್ಲಿ 15 ಮೆಟ್ರಿಕ್‌ ಟನ್‌ ಪ್ಲೇಟುಗಳು ಬಂದಿದ್ದು, ಪೈಪ್‌ಲೈನ್‌ ಮಾಡುವ ಬಗೆ ವಿವರಿಸಿದರು. ಕೆಲಸ ಪ್ರಗತಿಯ ಸಮಗ್ರ ಚಿತ್ರಣ ನೀಡಿದರು.

ಶಾಸರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೆಲಸ ಇನ್ನೂ ವೇಗವಾಗಿ ಮಾಡಿ ನಿಗದಿತ ಸಮಯಕ್ಕೂ ಮೊದಲೇ ಮುಗಿಸಲು ಕ್ರಮ ಕೈಗೊಳ್ಳಬೇಕು. ಯೋಜನೆ ಪೂರ್ಣ ಮುಗಿದರೆ ಅಥಣಿ ತಾಲೂಕಿನ ಶೇ.75ರಷ್ಟು ಭಾಗ ಸಂಪೂರ್ಣ ನೀರಾವರಿ ಆಗಲಿದೆ. ತಾಲೂಕಿನ ಪೂರ್ವಭಾಗ ಬರಗಾಲ ಪ್ರದೇಶ ಎಂಬ ಹಣೆಪಟ್ಟಿ ಕಳಿಚಿಕೊಳ್ಳಲಿದೆ ಎಂದು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಸಂಗಡ ಮಾತನಾಡಿ, ₹1500 ಕೋಟಿ ಮೊತ್ತದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ರಾಜ್ಯದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಉತ್ತರ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ನೂತನ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಕೆನಾಲ್‌ಗಳ ಬದಲಾಗಿ ಪೈಪ್‌ಲೈನ್‌ ಮೂಲಕ ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಅಮೋಘಸಿದ್ದ ಕೋಬ್ರಿ ಎಂಜಿನಿಯರ್‌ ಗಳಾದ ಪ್ರವೀಣ ಹುಣಸಿಕಟ್ಟಿ, ಮಹೇಶ ವಾವಳ, ಮುರುಘೇಶ ಭೋಮ್ಮನಾಳ, ಶಿವಶರಣ ಕರಡಿ, ಗುತ್ತಿಗೆದಾರ ಶಂಕರ ನಾರಾಯಣ ಇತರರು ಇದ್ದರು.

ಇದಕ್ಕೂ ಮುಂಚೆ ಕರಿಮಸೂತಿ ಯಾತ ನೀರಾವರಿ ಯೋಜನೆಯಿಂದ ಹೊಲಗಳಿಗೆ ಚಿಕ್ಕ ಕಾಲುವೆ ನಿಮಾರ್ಣದ ಮೂರು ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ನೀರಾವರಿ ಇಲಾಖೆ ಪುನರ್ ವಸತಿ ವಿಭಾಗದ ಎಂಜಿನಿಯರ್‌ ಎಸ್.ಎಸ್.ಬಾಗಿ ಇದ್ದರು.