ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಹೂನಗರ ಪ್ರದೇಶದ ಸಂಗಮ ಗಲ್ಲಿ ಮಾತೋಶ್ರೀ ಕಾಲೋನಿಯಲ್ಲಿ ಕಳೆದ 25 ವರ್ಷಗಳಿಂದ ನಿವಾಸಿಗಳು ಮೂಲಭೂತ ಸೌಲಭ್ಯಗಳಿಗಾಗಿ ಹಂಬಲಿಸುತ್ತಿದ್ದರು. ರಸ್ತೆ, ಚರಂಡಿ ಮತ್ತು ನೀರಿನ ಸರಬರಾಜು ಸಮಸ್ಯೆಗಳು ಈ ಪ್ರದೇಶದ ನಾಗರಿಕರಿಗೆ ದೀರ್ಘಕಾಲದಿಂದ ತೊಂದರೆಯಾಗಿದ್ದವು. ಈ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ನಾಯಕ ಸಂದೇಶ್ ರಾಜಮಾನೆ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ ಅವರನ್ನು ಭೇಟಿಯಾಗಿ ತಮ್ಮ ತೊಂದರೆಗಳನ್ನು ಗಮನಕ್ಕೆ ತಂದಿದ್ದರು.ಈ ಭೇಟಿಯ ಸಮಯದಲ್ಲಿ ಶಾಸಕ ಸೇಠ ಅವರು ಈ ಪ್ರದೇಶದ ಪರಿಶೀಲನೆ ನಡೆಸಿ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆಗೆ ಈಗ ಪೂರಕವಾಗಿ ಈ ಪ್ರದೇಶದಲ್ಲಿ ಚರಂಡಿ ನಿರ್ಮಾಣದ ಕೆಲಸ ಪೂರ್ಣಗೊಂಡಿದೆ. ಅಲ್ಲದೇ 24 ಗಂಟೆಗಳ ನೀರಿನ ಸರಬರಾಜಿಗಾಗಿ ಪೈಪ್‌ಲೈನ್‌ನ್ನು ಸಹ ಸ್ಥಾಪಿಸಲಾಗಿದೆ. ರಸ್ತೆ ಕೆಲಸವೂ ಪ್ರಾರಂಭವಾಗಿದ್ದು, ಅದು ತ್ವರಿತವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಂದ ಈಗ ಮಾತೋಶ್ರೀ ಕಾಲೋನಿಯ ನಿವಾಸಿಗಳು ಶಾಸಕ ಆಸೀಫ್ ಸೇಠ ಅವರಿಗೆ ತಮ್ಮ ಸಮಸ್ಯೆಗಳತ್ತ ಗಮನ ಸೆಳೆದುಕೊಂಡು ಮತ್ತು ತಮ್ಮ ಭರವಸೆಗೆ ಅನುಗುಣವಾಗಿ ಕೆಲಸಗಳನ್ನು ಪ್ರಾರಂಭಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.25 ವರ್ಷಗಳ ನಂತರ ನಮ್ಮ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳು ಬರುವುದು ನಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯಾಗಿದೆ. ಶಾಸಕ ಆಸೀಫ್ ಸೇಠ ಅವರು ನಮ್ಮ ಸಮಸ್ಯೆಗಳತ್ತ ಗಮನ ಕೊಟ್ಟಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ. ಈ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಶಾಹೂನಗರ ಪ್ರದೇಶದ ನಿವಾಸಿಗಳ ಜೀವನದಲ್ಲಿ ದೊಡ್ಡ ಬದಲಾವಣೆ ಸಂಭವಿಸಲಿದೆ ಮತ್ತು ಅವರ ದೈನಂದಿನ ತೊಂದರೆಗಳು ಕಡಿಮೆಯಾಗಲಿವೆ. ಈಗ ಎಲ್ಲರ ಗಮನ ಈ ಕೆಲಸಗಳ ಗುಣಮಟ್ಟ ಮತ್ತು ಅವುಗಳ ಸಮಯ ಸೀಮೆಯತ್ತ ಇರುತ್ತದೆ.
-ಸಂದೇಶ್ ರಾಜಮಾನೆ ಕಾಂಗ್ರೆಸ್ ಯುವ ಮುಖಂಡ.