ಕನ್ನಡಪ್ರಭ ವಾರ್ತೆ ಬೀದರ್
ಕುಡಿಯುವ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ, ಟ್ಯಾಂಕ್ ಪರಿಸರಕ್ಕೆ ಫೆನ್ಸಿಂಗ್ ಅಳವಡಿಸಬೇಕು. ಮೇಲೆ ಟ್ಯಾಂಕ್ ಗೆ ಮುಚ್ಚಳ ಹಾಕಿ, ಬೀಗ ಹಾಕಬೇಕು. 8 ದಿನ ಈ ಟ್ಯಾಂಕ್ ಬಳಕೆ ಮಾಡಬಾರದು. ಟ್ಯಾಂಕ್ ಸಂಪೂರ್ಣವಾಗಿ ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಣ ಮಾಡಬೇಕು. ಸಾರ್ವಜನಿಕರಿಗೆ ಈ ಅವಧಿಯಲ್ಲಿ ತಕ್ಷಣದಿಂದಲೇ ಕೆಲ ದಿನಗಳ ಕಾಲ ಶುದ್ಧ ಕುಡಿಯುವ ನೀರಿನ ಕ್ಯಾನ್ ಮನೆಗೆ ತಲಪಿಸಬೇಕು ಎಂದು ತಾಪಂ ಅಧಿಕಾರಿಗಳಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸೂಚನೆ ನೀಡಿದರು.ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಆಣದೂರ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿದ ಘಟನೆ ಹಿನ್ನೆಲೆ ಶನಿವಾರ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ತಕ್ಷಣವೇ ತಾಪಂ ಅಧಿಕಾರಿ, ಪಿಡಿಒ ಅಧಿಕಾರಿಗಳಿಗೆ ಕರೆ ಮಾಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಪರ್ಯಾಯ ವ್ಯವಸ್ಥೆಗಾಗಿ ಕೂಡಲೇ ಒಂದು ಬೋರ್‌ವೆಲ್ ಕೊರೆಯಿಸುವಂತೆ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಗತ್ಯ ಕ್ರಮಕ್ಕಾಗಿ ಮೇಲಧಿಕಾರಿಗಳ ಜೊತೆಗೂ ದೂರವಾಣಿಯಲ್ಲಿ ಮಾತನಾಡಿ ಸೂಚನೆ ನೀಡಿದರು.ಎರಡು ದಿನದ ಹಿಂದೆ ವ್ಯಕ್ತಿ ಮೃತಪಟ್ಟ ಕಾರಣ ಮೃತದೇಹ ಡಿ-ಕಂಪೋಸ್ (ಪೂರ್ಣ ಕೊಳೆತು ಒಡೆದಿಲ್ಲ) ಆಗಿಲ್ಲ. ನಲ್ಲಿಗೆ ಬರುವ ನೀರು ವಾಸನೆಯಾದ ಬಗ್ಗೆ ಗ್ರಾಮಸ್ಥರು ಗಮನಕ್ಕೆ ಬರುತ್ತಲೇ ಗ್ರಾಪಂನವರಿಗೆ ತಿಳಿಸಿದ ಕಾರಣ ಬೇಗ ವಿಷಯ ಗೊತ್ತಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ವೈದ್ಯರು ಸೇರಿ ಆರೋಗ್ಯ ಸಿಬ್ಬಂದಿಗೆ ಎರಡು ದಿನ ಸ್ಥಳದಲ್ಲಿ ನಿಯೋಜಿಸಲಾಗಿದೆ. ಗ್ರಾಪಂನಲ್ಲಿ ತಾತ್ಕಾಲಿಕ ಶಿಬಿರ ಹಾಕಿದ್ದು, ಇನ್ನೊಂದು ವಾರ ಈ ತಂಡ ಇಲ್ಲೇ ಉಳಿಯಲಿದೆ. ಎಲ್ಲ ತರಹದ ಔಷಧಿಗಳ ಸ್ಟಾಕ್ ಇಟ್ಟುಕೊಳ್ಳಬೇಕು ಎಂದು ಶಾಸಕರು ವೈದ್ಯರಿಗೆ ಸೂಚಿಸಿದರು. ಸಾರ್ವಜನಿಕರಿಗೆ ಆರೋಗ್ಯದಲ್ಲಿ ಏನೇ ಸಮಸ್ಯೆಯಾದರೂ ಕೂಡಲೆ ವೈದ್ಯರಿಗೆ ಭೇಟಿ ನೀಡಬೇಕು ಎಂದು ಹೇಳಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಮಾದಪ್ಪ, ಉಪಾಧ್ಯಕ್ಷೆ ಶ್ರೀದೇವಿ ಅಂಬಾದಾಸ, ಪಿಡಿಒ ಮಲ್ಲಿಕಾರ್ಜುನ ಡೋಣೆ, ವೈದ್ಯರಾದ ಡಾ.ಬಸವಪ್ರಸಾದ, ಪ್ರಮುಖರಾದ ಶ್ರೀನಿವಾಸರೆಡ್ಡಿ, ಸುರೇಶ ಮಾಶೆಟ್ಟಿ, ಬಸವರಾಜ ಸಿಂದಬಂದಗಿ, ಬಸವರಾಜ ಪಾಟೋದಿ, ಸಂತೋಷ ರೆಡ್ಡಿ, ಸಂತೋಷ ಸೋರಳ್ಳಿ, ಭೀಮಣ್ಣ ಸೋರಳ್ಳಿ, ರಾಜು ಪೋಳ, ಶಿವಶಂಕರ ಫುಲೆ, ಸಾಯಿಕುಮಾರ, ಮೋಯಿಜ್, ಕಿಶೋರ್, ಚಂದ್ರಾರೆಡ್ಡಿ, ಸಾಯಿನಾಥ, ಆಕಾಶರೆಡ್ಡಿ, ಈಶ್ವರ ಸಿಕೆನಪುರ, ಶಾದ್ರಕ್, ಗೋಪಾಲ, ಚೆನ್ನಪ್ಪ, ಪ್ರವೀಣ ಪಟೋದಿ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.