ಯಲ್ಲಾಪುರ: ಹಿರಿಯ ಶಾಸಕ ಎಚ್.ಕೆ.ಪಾಟೀಲ್ ತನ್ನ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದಿದ್ದಾರೆ. ಆದರೆ ಶೇ.೭೦ ರಷ್ಟು ಮತದಾರರಿಗೆ ಸರಕಾರದ ಈಗಿನ ಸುತ್ತೋಲೆಯಿಂದ ತೀವ್ರ ತೊಂದರೆ ಉಂಟುಮಾಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರು ವಿಧಾನಸಭೆಯಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಬೇಕಿತ್ತು ಎಂದು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.
ಹಿರಿಯ ನಾಯಕ ಉಮೇಶ್ ಭಾಗ್ವತ ಮಾತನಾಡಿ, ಅತಿಕ್ರಮಣದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇದಕ್ಕೆ ಯಲ್ಲಾಪುರದ ಶಾಸಕರು ಸಂಪೂರ್ಣ ಹೊಣೆ ಹೊತ್ತು ಈ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಗಣಪತಿ ಮಾನಿಗದ್ದೆ ಮಾತನಾಡಿ, ಸರಕಾರದ ಪ್ರತಿ ಆದೇಶಗಳು ಜನರಿಗೆ ಉರುಳಾಗುತ್ತಿದೆ. ಒಂದು ದಿನ ಗುಟ್ಕಾ ನಿಷೇಧ, ಒಂದು ದಿನ ಕರ ಸ್ವೀಕರಿಸಬಾರದೆಂಬ ಸರಕಾರದ ಆದೇಶಗಳು ಜನಸಾಮಾನ್ಯರ ಬಾಳಿನ ಜೊತೆಗೆ ಚೆಲ್ಲಾಟ ವಾಡುತ್ತಿವೆ ಎಂದು ಆರೋಪಿಸಿದರು.ದೇಹಳ್ಳಿಯಲ್ಲಿ ಗಣಪತಿ ಮುದ್ದೇಪಾಲ ಮಾತನಾಡಿ, ಕಾಂಗ್ರೆಸ್ ನಮಗೆಲ್ಲರಿಗೂ ಮಾರಕ. ಜನಸಾಮಾನ್ಯರ ಆಶೋತ್ತರಗಳನ್ನು ಧಿಕ್ಕರಿಸಿ ತಮ್ಮ ಮನಸ್ಸಿಗೆ ಬಂದ ಹಾಗೆ ಆಡಳಿತ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ದಂಗೆ ಏಳಲು ಕಾರಣವಾಗುತ್ತದೆ ಎಂದರು.