ಪ್ರತಿಯೊಬ್ಬರೂ ಕನ್ನಡ, ನೆಲ, ಜಲ ಆರಾಧಿಸಲು ಶಾಸಕ ಶಿವರಾಮ ಹೆಬ್ಬಾರ ಮನವಿ

KannadaprabhaNewsNetwork | Published : Oct 17, 2024 12:01 AM

ಸಾರಾಂಶ

ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮ್ಮೇಳನಗಳು ನಡೆಯಬೇಕು. ಕನ್ನಡ ಸಾಹಿತ್ಯ ಸಮ್ಮೇಳನದಿಂದ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವಾದರೆ ಮಾತ್ರ ಅದಕ್ಕೆ ಬೆಲೆ ಹಾಗೂ ಗೌರವ ಬರುತ್ತದೆ.

ಮುಂಡಗೋಡ: ಮಾತೃಭಾಷೆಯೊಂದಿಗೆ ಇನ್ನುಳಿದ ಭಾಷೆಗಳನ್ನು ಕೂಡ ಗೌರವಿಸುವಂತಹ ಸಂಪ್ರದಾಯ ಕನ್ನಡಿಗರದ್ದಾಗಿದೆ. ಪ್ರತಿಯೊಬ್ಬರೂ ಕನ್ನಡ ನೆಲ, ಜಲವನ್ನು ಹೆತ್ತ ತಾಯಿಯಂತೆ ಪ್ರೀತಿಸಿ, ಗೌರವಿಸಿ ಆರಾಧಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಬುಧವಾರ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಮುಂಡಗೋಡ ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮ್ಮೇಳನಗಳು ನಡೆಯಬೇಕು. ಕನ್ನಡ ಸಾಹಿತ್ಯ ಸಮ್ಮೇಳನದಿಂದ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವಾದರೆ ಮಾತ್ರ ಅದಕ್ಕೆ ಬೆಲೆ ಹಾಗೂ ಗೌರವ ಬರುತ್ತದೆ. ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸಮಾಜವನ್ನು ಒಂದುಗೂಡಿಸುವಂಥ ಕೆಲಸ ಮಾಡಬಹುದು. ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಣಪ್ರೇಮಿ ಎಸ್. ಫಕ್ಕೀರಪ್ಪ ಅವರನ್ನು ಆಯ್ಕೆ ಮಾಡಿರುವುದು ಕೂಡ ಸಾಮಾಜಿಕ ನ್ಯಾಯಕ್ಕೆ ಹಿಡಿದಿರುವ ಕನ್ನಡಿಯಾಗಿದೆ. ದಿನಕರ ದೇಸಾಯಿ ಸೇರಿದಂತೆ ಅನೇಕ ಪುಣ್ಯಾತ್ಮರನ್ನು ಕಂಡ ಜಿಲ್ಲೆ ಇದಾಗಿದ್ದು, ಇಂತಹ ಜಿಲ್ಲೆಯಲ್ಲಿ ಜನಿಸಿದ ನಾವು ಧನ್ಯರು ಎಂದರು.ಸಮ್ಮೇಳನಾಧ್ಯಕ್ಷರ ನುಡಿ: ಜಗತ್ತಿನ ಹಲವಾರು ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂದು ಶ್ರೇಷ್ಠ ಭಾಷೆಯಾಗಿದ್ದು, ಒಂದೊಂದು ಭಾಗದಲ್ಲಿ ಒಂದೊಂದು ಶೈಲಿಯಲ್ಲಿ ಕನ್ನಡ ಭಾಷೆ ಮೊಳಗುವುದು ವಿಶೇಷ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಎಸ್. ಫಕ್ಕೀರಪ್ಪ ತಿಳಿಸಿದರು.

೧೨ನೇ ಶತಮಾನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದ ಮೂಲಕ ಕನ್ನಡ ಬಹಳಷ್ಟು ಬದಲಾವಣೆಯನ್ನು ಕಂಡಿದ್ದು, ಬೆಳೆಯುತ್ತ ಜನರು ಆಡುವ ಭಾಷೆಯಾಗಿ ಹೊರಹೊಮ್ಮಿದೆ. ಕನ್ನಡ ಏಕೀಕರದಲ್ಲಿ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಇರುವ ಶ್ರೇಷ್ಠತೆ ಇನ್ನಾವುದೇ ಭಾಷೆಯಲ್ಲಿ ಕಾಣುವುದಿಲ್ಲ. ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆಪಡಬೇಕು ಎಂದರು.

ಮಂಡಗೋಡ ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಡಿ ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ನೆರವೇರಿಸಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚಿದಾನಂದ ಪಾಟೀಲ್ ಧ್ವಜವನ್ನು ಹಸ್ತಾಂತರಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಪಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಹಾಗೂ ಮಂಜುನಾಥ ಕಲಾಲ, ರಾಮು ಬೆಳ್ಳನವರ, ಸುಭಾಸ ವಡ್ಡರ, ಮಲ್ಲಮ್ಮ ನೀರಲಗಿ, ಶಾರದಾ ರಾಥೋಡ ಮುಂತಾದವರು ಉಪಸ್ಥಿತರಿದ್ದರು. ಡಾ. ಪಿ.ಪಿ. ಛಬ್ಬಿ ವೇದಿಕೆ ಹಾಗೂ ಎಸ್.ಕೆ. ಬೋರ್ಕರ ಮುಖ್ಯದ್ವಾರ ಪರಿಚಯಿಸಿದರು. ವಿಶ್ವನಾಥ ಹಿರೇಮಠ ಪ್ರಾರ್ಥಿಸಿದರು. ನಯನಾ ಕಾಮತ್ ಸಂಗಡಿಗರು ನಾಡಗೀತೆ ಹಾಡಿದರು. ಬಾಲಚಂದ್ರ ಹೆಗಡೆ, ದಿನೇಶ ವೆರ್ಣೇಕರ, ಶಹನಾಜ ದೊಡ್ಮಿನಿ ನಿರೂಪಿಸಿದರು.

Share this article