ಕಾಂಗ್ರೆಸ್ ಪಕ್ಷದ ಸದಸ್ಯರು, ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಕನ್ನಡಪ್ರಭ ವಾರ್ತೆ ಅರಸೀಕೆರೆಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬುಧವಾರ ಸಂಜೆ ನಗರಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.
ಚನ್ನರಾಯಪಟ್ಟಣ ಮೂಲಕ ಶಿವಲಿಂಗೇಗೌಡ ನಗರಕ್ಕೆ ಆಗಮಿಸುವ ಮುನ್ನವೇ ತಾಲೂಕಿನ ಗಡಿಭಾಗದಲ್ಲಿ ಕಾದು ನಿಂತಿದ್ದ ನೂರಾರು ಮಂದಿ, ಜಯಘೋಷದ ಮೂಲಕ ಬರ ಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ತಮ್ಮ ನೆಚ್ಚಿನ ಶಾಸಕರನ್ನು ಮೆರವಣಿಗೆಯಲ್ಲಿ ಕರೆತಂದರು. ರಸ್ತೆಯ ಇಕ್ಕೆಲಗಳಲ್ಲೂ ನಿಂತಿದ್ದ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪವೃಷ್ಟಿ ಮಾಡಿದರೆ ಮತ್ತೆ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು.ಮಾರ್ಗಮಧ್ಯೆ ಶಾಸಕ ಶಿವಲಿಂಗೇಗೌಡ ಮೈಸೂರು ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಅವರು ಬಸವೇಶ್ವರ ವೃತ್ತಕ್ಕೆ ಸಾಗಿದಾಗ ಸಾವಿರಾರು ಮಂದಿ ಜಮಾಯಿಸಿದ್ದರು. ಈ ವೇಳೆ ತೆರೆದ ವಾಹನದಲ್ಲೇ ನಿಂತು ಜನರನ್ನು ಉದ್ದೇಶಿಸಿ ಮಾತನಾಡಿ, ‘ನಿಮ್ಮ ಆಶೀರ್ವಾದ ಬಲದಿಂದ ನನಗೆ ಈ ಅಧಿಕಾರ ಸಿಕ್ಕಿದೆ. ಇದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಇಡೀ ಕ್ಷೇತ್ರದ ಜನರ ಗೌರವ ಎತ್ತಿ ಹಿಡಿಯುವೆ. ನನಗೆ ಅವಕಾಶ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಅನ್ಯತಾ ಭಾವಿಸಬೇಡಿ:‘ನನಗೆ ರಾಜ್ಯ ಪ್ರವಾಸ ಮಾಡುವ ಜವಾಬ್ದಾರಿಯನ್ನು ನಮ್ಮ ನಾಯಕರು ನೀಡಿರುವುದರಿಂದ ಕ್ಷೇತ್ರದ ಜನರಿಗೆ ಮುಂದಿನ ದಿನಗಳಲ್ಲಿ ನಾನು ಸಿಗುವುದು ಕಡಿಮೆ ಆಗಬಹುದು. ಯಾರೂ ತಪ್ಪು ತಿಳಿಯಬೇಡಿ. ರಾಜ್ಯಾದ್ಯಂತ ಸುತ್ತಾಡಿ, ಬಡವರು, ನಿರ್ಗತಿಕರ ಪರ ಕೆಲಸ ಮಾಡಬೇಕಾಗಿದೆ. ನೆಲೆ ಇಲ್ಲದವರಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ. ಅದಕ್ಕಾಗಿ ಅನ್ಯತಾ ಭಾವಿಸಬೇಡಿ, ನಾನು ಎಂದೆಂದಿಗೂ ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ’ ಎಂದು ನುಡಿದರು.
‘ನಮ್ಮ ಸರ್ಕಾರ ಹಲವು ಜನಪರ ಯೋಜನೆ ಅನುಷ್ಠಾನ ಮಾಡಿದೆ. ಯಾವುದೇ ರೀತಿಯ ಅಭಿವೃದ್ಧಿ ಕುಂಠಿತ ಆಗಿಲ್ಲ. ನನ್ನ ಹೋರಾಟದ ಫಲವಾಗಿ ಕೊಬ್ಬರಿಗೆ ಕೇಂದ್ರದಿಂದ ೧೨ ಸಾವಿರ ರು., ರಾಜ್ಯದಿಂದ ೧,೫೦೦ ರು. ಸೇರಿ ಒಟ್ಟು ೧೩.೫೦೦ ರು. ಬೆಂಬಲ ಬೆಲೆ ಸಿಗುತ್ತಿದೆ. ಹೋರಾಟದ ಕಿಚ್ಚನ್ನು ಕೊಟ್ಟವರು ನೀವು, ನಿಮ್ಮ ಸಹಕಾರವನ್ನು ನಾನೆಂದಿಗೂ ಮರೆಯುವುದಿಲ್ಲ. ಇಂದು ನನ್ನ ಸ್ವಾಗತಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ಚಿರಋಣಿಯಾಗಿರುತ್ತೇನೆ’ ಎಂದು ಹೇಳಿದರು.ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಮಂಜುರಾಜ್, ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಗಿರೀಶ್, ಕೃಷ್ಣ, ಧರ್ಮಶೇಖರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಯರಾಂ, ತಾಲೂಕು ದಲಿತಪರ ಒಕ್ಕೂಟಗಳ ಅಧ್ಯಕ್ಷ ವೆಂಕಟೇಶ್ ಇದ್ದರು.
ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸೀಕೆರೆಗೆ ಭೇಟಿ ನೀಡಿ ಸುಮಾರು ೬೦ ಕೋಟಿ ರು. ವೆಚ್ಚದ ಕಾಮಗಾರಿಗೆ ಬಾಣಾವರದಲ್ಲಿ ಚಾಲನೆ ನೀಡಲಿದ್ದಾರೆ. ಮಾ.೧ ರಂದು ಹಾಸನಕ್ಕೆ ಆಗಮಿಸಿ ಸಾವಿರಾರು ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಅಂದು ಎತ್ತಿನಹೊಳೆ ಯೋಜನೆ ವಾಸ್ತವತೆ ವಿವರಿಸಲಿದ್ದಾರೆ.ಕೆ.ಎಂ. ಶಿವಲಿಂಗೇಗೌಡ, ಕೆಎಚ್‌ಬಿ ಅಧ್ಯಕ್ಷ.ಗೃಹ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ನಗರಕ್ಕೆ ಆಗಮಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.