ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಟ್ಟಸಂದ್ರದ ಪುರಾಣ ಪ್ರಸಿದ್ಧ ಬೆಟ್ಟದ ಭೈರವೇಶ್ವರ ಸ್ವಾಮಿಗೆ ತಾಯಿ, ಪತ್ನಿ, ಮಗನೊಂದಿಗೆ ಆಗಮಿಸಿದ ಶಾಸಕ ಎನ್.ಶ್ರೀನಿವಾಸ್ ರವರು ಪೂಜೆ ಸಲ್ಲಿಸಿ ಮಾತನಾಡಿದರು.
ನೆಲಮಂಗಲ ಪವಿತ್ರ ಪುಣ್ಯಭೂಮಿಯಾಗಿದ್ದು,ಇಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನ ಹಾಗೂ ಮಠಗಳಿವೆ. ಚುನಾವಣೆ ಪ್ರಚಾರದ ವೇಳೆ ಅನೇಕ ಗ್ರಾಮಗಳಲ್ಲಿ ಜನರು ನಿಮಗೆ ಒಳ್ಳೆಯದಾಗಲಿ ಎಂದು ನನಗೆ ಆಶೀರ್ವಾದ ಮಾಡಿ ಶಾಸಕನನ್ನಾಗಿಸಿದರು. ಆದ್ದರಿಂದ ಕ್ಷೇತ್ರದ ಪ್ರಮುಖ ಪುರಾಣ ಪ್ರಸಿದ್ಧ ದೇವರಿಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ, ಮತ್ತಷ್ಟು ಶಕ್ತಿ ನೀಡಲು ಪ್ರಾರ್ಥಿಸಿದ್ದೇನೆ ಎಂದರು.ವಿಶೇಷ ಪೂಜೆ: ಬೆಟ್ಟದ ಭೈರವ ಸ್ವಾಮಿ, ಸೋಮನಾಥೇಶ್ವರ, ಗಣೇಶನಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಎನ್.ಶ್ರೀನಿವಾಸ್, ಶಾಸಕರ ಪತ್ನಿ ಪ್ರಿಯಾ ಹರ್ಷಿತಾ, ತಾಯಿ ವೆಂಕಟಲಕ್ಷ್ಮಮ್ಮ ಸೇರಿ ಕುಟುಂಬ ಸದಸ್ಯರಾದ ಚೇತನ್, ಅನೇಕರು ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
ಬಿಟ್ಟಸಂದ್ರ ಗ್ರಾಮದ ಮುಂಭಾಗದಿಂದ ಬೆಟ್ಟದ ಭೈರವೇಶ್ವರ ಸ್ವಾಮಿಯ ದೇವಾಲಯದವರೆಗೂ ಇರುವ ರಸ್ತೆಯ ಅಭಿವೃದ್ಧಿಗೆ ಶಾಸಕರು 2 ಕೋಟಿ ರು. ಅನುದಾನದಲ್ಲಿ ಕಾಂಕ್ರೀಟ್ ಹಾಗೂ ಡಾಂಬರೀಕರಣ ಮಾಡುವ ಭರವಸೆ ನೀಡಿದ್ದರು, ಅದರಂತೆ ಶೀಘ್ರದಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುವುದಾಗಿ ತಿಳಿಸಿದರು.