ಕನ್ನಡಪ್ರಭ ವಾರ್ತೆ ಬೇಲೂರುಇಲ್ಲಿನ ಬಿಕ್ಕೋಡು ರಸ್ತೆಯಲ್ಲಿ ಬಿಷ್ಟಮ್ಮನ ಕೆರೆ ಕೋಡಿಯಿಂದ, ಸನ್ಯಾಸಿಹಳ್ಳಿವರೆಗೆ ಹಾಕಿರುವ ಡಾಂಬರ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಶಾಸಕ ಎಚ್. ಕೆ. ಸುರೇಶ್ ಅವರು ಎಂಜಿನಿಯರ್ ಗಳನ್ನು ತರಾಟೆ ತೆಗೆದುಕೊಂಡರು.ಸಾರ್ವಜನಿಕರ ದೂರಿನ ಮೇರೆಗೆ ರಸ್ತೆಗೆ ಹಾಕಲಾಗಿರುವ ಡಾಂಬರ್ ಕಾಮಗಾರಿಯನ್ನು ತೀಕ್ಷ್ಣವಾಗಿ ಪರಿಶೀಲಿಸಿದ್ದ ಶಾಸಕ ಎಚ್. ಕೆ. ಸುರೇಶ್ ಅವರು ಎಇ ಸೋಮಶೇಖರ್ ವಿರುದ್ದ ಕೆಂಡಾಮಂಡಲವಾಗಿ ತರಾಟೆ ತೆಗೆದುಕೊಂಡರು. ನೀವು ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಕಳಪೆ ಕಾಮಗಾರಿಗಳು ನಡೆಯುವುದಿಲ್ಲ. ಕಾಮಗಾರಿ ನಡೆಯುವ ಸಂದರ್ಭ ನೀವು ಏನು ಮಾಡುತ್ತಿರುವಿರಿ ಎಂದು ಪ್ರಶ್ನಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂಐಡಿಪಿ ಯೋಜನೆಯ 2.15 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯಲ್ಲಿ ಕಳಪೆಯಾಗಿರುವುದು ಶೇ 100ರಷ್ಟು ಸತ್ಯ. ಎಂಜಿನಿಯರ್‌ಗಳ ಲೋಪ ಇಲ್ಲಿ ಕಂಡುಬರುತ್ತಿದೆ. ಕಾಮಗಾರಿಯಲ್ಲಾಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಡುವುದಾಗಿ ಕಾರ್ಯಪಾಲಕ ಅಭಿಯಂತರ ಜಯಣ್ಣನವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ಕಾಮಗಾರಿಗಳ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಅಳಲಿನ ಕಾರಣದಿಂದ ಹಾಗೂ ಶಾಸಕರು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಬೈಯ್ಯುತ್ತಾರೆ, ಎಂಬ ಆರೋಪದ ಕಾರಣದಿಂದ ನಾನು ಒಂದಿಷ್ಟು ಸಡಿಲಿಕೆ ಕೊಟ್ಟ ಪರಿಣಾಮ ಇದಾಗಿದ್ದು, ಇನ್ನು ಮುಂದೆ ಪ್ರತಿ ಕಾಮಗಾರಿಗಳನ್ನು ಪ್ರಾರಂಭದಿಂದಲ್ಲೇ ಸಾರ್ವಕನಿಕರ ಸಮ್ಮುಖದಲ್ಲೇ ಪರಿಶೀಲಿಸಿ ಉತ್ತಮ ಗುಣಮಟ್ಟದ ಕಾಮಗಾರಿಗಳು ನಡೆಯಲು ಆದ್ಯತೆ ನೀಡುತ್ತೇನೆ ಎಂದರು.ಕಾರ್ಯಪಾಲಕ ಎಂಜಿನಿಯರ್ ಜಯಣ್ಣ ಮಾತನಾಡಿ, ಕಾಮಗಾರಿಯಲ್ಲಿ ನ್ಯೂನತೆ ಇರುವುದು ಕಂಡುಬಂದಿದ್ದು, ಗುತ್ತಿಗೆದಾರರಿಗೆ ತಿಳಿಹೇಳಿ ಸರಿಪಡಿಸಿಕೊಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸನ್ಯಾಸಿಹಳ್ಳಿ ನರೇಂದ್ರ, ಗುತ್ತಿಗೆದಾರ ವೆಂಕಟೇಗೌಡ, ಸ್ಥಳೀಯರಾದ ಕಾಂತರಾಜು, ರಮೇಶ್, ಮಲ್ಲಿಕ ಇತರರು ಇದ್ದರು.