ಹನಿಟ್ರ್ಯಾಪ್‌ ಬಗ್ಗೆ ಮಾತನಾಡಿದಕ್ಕೆ ಶಾಸಕರ ಅಮಾನತು: ಸಚಿವ ಸಂತೋಷ್‌ ಲಾಡ್‌

KannadaprabhaNewsNetwork |  
Published : Mar 24, 2025, 12:33 AM IST
ಕಾರ್ಮಿಕ ಸಚಿವ | Kannada Prabha

ಸಾರಾಂಶ

ಬಿಜೆಪಿಯವರು ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡಬೇಕು ಎನ್ನುವ ಕಾರಣಕ್ಕೆ ಹದಿನೆಂಟು ಶಾಸಕರು ಆರು ತಿಂಗಳು ಅಮಾನತು ಆಗಿದ್ದಾರೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಹುಬ್ಬಳ್ಳಿ: ಬಿಜೆಪಿಯವರು ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡಬೇಕು ಎನ್ನುವ ಕಾರಣಕ್ಕೆ ಹದಿನೆಂಟು ಶಾಸಕರು ಆರು ತಿಂಗಳು ಅಮಾನತು ಆಗಿದ್ದಾರೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ ವಿಷಯವನ್ನು ಸದನದಲ್ಲಿ ಮುಖ್ಯವಾಗಿ ತೆಗೆದುಕೊಳ್ಳಿ ಎಂದು ಬಿಜೆಪಿ ಸದಸ್ಯರು ಕಲಾಪದಲ್ಲಿ ಗದ್ದಲ ಮಾಡಿದ್ದರು. ಸರ್ಕಾರ ಹನಿಟ್ರ್ಯಾಪ್‌ ಬಗ್ಗೆ ಸ್ಪಷ್ಟನೆ ನೀಡಿತ್ತು. ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿ, ಗೃಹ ಮಂತ್ರಿ ಹೇಳಿದ್ದರು. ಆದರೂ ಗಲಾಟೆ ಮುಂದುವರಿಸಿದರೆ ಎಷ್ಟು ಸರಿ? ಸ್ಪೀಕರ್ ಹತ್ತಿರ ಗಲಾಟೆ ಮಾಡಿ ಕಾಗದಪತ್ರವನ್ನು ಅವರ ಮೇಲೆ ಎಸೆಯುವ ಅವಶ್ಯಕತೆ ಏನಿತ್ತು? ಅದಕ್ಕಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಇದರಲ್ಲೇನು ತಪ್ಪು ಎಂದು ಸಮರ್ಥಿಸಿದರು.

ಹನಿಟ್ರ್ಯಾಪ್ ಬಗ್ಗೆ ಅವಸರ ಏನಿದೆ? ಹನಿಟ್ರ್ಯಾಪ್‌ಗಿಂತ ಮುಖ್ಯವಾಗಿ ಚರ್ಚೆ ಮಾಡುವ ಹಲವು ವಿಷಯಗಳಿದ್ದವು. ರೈತರ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಬೇಕಿತ್ತು. ಬಿಜೆಪಿ ಅವರಿಗೆ ಪ್ರಚಾರ ಗಿಟ್ಟಿಸಿಕೊಳ್ಳಬೇಕು, ಮಾಧ್ಯಮಗಳಲ್ಲಿ ಬರಬೇಕು ಎಂಬ ಉದ್ದೇಶವಿದೆ. ಅವರ ಸಾಧನೆ ಏನಿದೆ? ನ್ಯಾಯ ಕಲಾಪದಲ್ಲಿ ಸಿಗುತ್ತಾ? ಬಿಜೆಪಿಯವರ ಈ ವರ್ತನೆ ನಾಚಿಕೆಗೇಡು. ಇದರ ಬಗ್ಗೆ ವಿಷಾದವಿದೆ ಎಂದರು.

ಲಿಖಿತ ದೂರು ನೀಡುವುದು ಬೇಡ, ಸರ್ಕಾರವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತದೆ. ಸರ್ಕಾರ ಸದನದಲ್ಲಿ ಹೇಳಿದ ಮೇಲೆ ಮುಗಿಯಿತು. ಇದು ನಮ್ಮ ಸಮಾಜ ಅವನತಿಗೆ ಹೋಗುತ್ತಿರುವ ಸೂಚನೆ. ಇಂತಹ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ನಾವು ಬರೀ ಹನಿಟ್ರ್ಯಾಪ್ ಬಗ್ಗೆ ಮಾತನಾಡುತ್ತೇವೆ. ಇದು ನಾಚಿಕೇಡು ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭಾ ಕ್ಷೇತ್ರ

ಕೇಂದ್ರ ಸರ್ಕಾರ ಯಾವ ಮಾನದಂಡ ಪರಿಗಣಿಸಿ ಕ್ಷೇತ್ರ ಮರುಹಂಚಿಕೆ ಮಾಡುತ್ತಿದೆ ಎಂಬ ಆತಂಕ ನಮಗಿದೆ. ಪಕ್ಷಾತೀತವಾಗಿ ಎಲ್ಲರಿಗೂ ಈ ಆತಂಕ ಇದೆ. ಪ್ರತಿನಿಧಿಸುವ ಅವಕಾಶ ಕಡಿಮೆಯಾದರೆ ನಮಗೆ ತೊಂದರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲ ಈ ಬಗ್ಗೆ ಪ್ರಶ್ನಿಸಬೇಕು ಎಂದರು.

ಬಿಜೆಪಿ ಶಾಸಕರ ಅಮಾನತು ನಿರ್ಧಾರ ಸರಿ: ಸಚಿವ ದಿನೇಶ

ಹುಬ್ಬಳ್ಳಿ: ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿರುವ ನಿರ್ಧಾರ ಸರಿಯಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್‌ ಸಮರ್ಥಿಸಿಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಮಾಡಿದ್ದಾರೆ. ಸ್ಪೀಕರ್‌ ಮೇಲೆ ಹಲ್ಲೆ ನಡೆಸಲು ಮುಂದಾಗಿ, ನಿಯಮ ಉಲ್ಲಂಘಿಸಿ, ಸದನಕ್ಕೆ ಅಗೌರವ ತಂದಿದ್ದಾರೆ. ಮುಖ್ಯಮಂತ್ರಿ ಭಾಷಣ ಮಾಡಬಾರದು, ಬಜೆಟ್ ಮೇಲೆ ಚರ್ಚೆ ನಡೆಸಬಾರದು ಎಂದು ಗದ್ದಲ ಮಾಡಿದ್ದಾರೆ ಎಂದು ಹೇಳಿದರು.

ಹನಿಟ್ರ್ಯಾಪ್ ವಿಷಯ ಗಂಭೀರವಾಗಿದ್ದು, ಸಚಿವ ಕೆ.ಎನ್. ರಾಜಣ್ಣ ಅವರು ಈಗಾಗಲೇ ದೂರು ನೀಡಿದ್ದಾರೆ. ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಆದರೂ ಬಿಜೆಪಿಗರು ಗದ್ದಲ ಮಾಡಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ