ಕನ್ನಡಪ್ರಭ ವಾರ್ತೆ ಹಾಸನ
ಮನೆಯಲ್ಲಿ ಮಕ್ಕಳು ಮೊಬೈಲ್ ನಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು.ನಗರದ ಶ್ರೀ ಸಂಗಮೇಶ್ವರ ಬಡಾವಣೆ ಶ್ರೀ ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಮೈ ಲಿಟ್ಲ್ ವರ್ಲ್ಡ್ ಫ್ರೀ ಶಾಲೆಯ ವತಿಯಿಂದ ಶನಿವಾರದಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ವಾರ್ಷಿಕ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಶಾಲಾ ಸಮಯ ಮುಗಿದ ನಂತರ ಮಕ್ಕಳು ಮನೆಯಲ್ಲಿ ಮೊಬೈಲ್ ಹಿಡಿದು ಸಮಯ ಕಳೆಯುತ್ತಿದ್ದಾರೆ. ಆದ್ದರಿಂದ ಪೋಷಕರು ಮೊಬೈಲನ್ನು ಮಕ್ಕಳಿಗೆ ಸಿಗದಂತೆ ದೂರದಲ್ಲಿಟ್ಟು ಬೇರೆಡೆ ಗಮನ ಸೆಳೆಯುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.ದಿನದ ಕೆಲ ಸಮಯ ಕ್ರೀಡೆಯಲ್ಲಿ ತೊಡಗಿಸಬೇಕು. ಮಕ್ಕಳ ದೈಹಿಕ ಬೆಳೆವಣಿಗೆ ಕಡೆಯೂ ಗಮನ ನೀಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಈ ಶಿಕ್ಷಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಹಾಗೂ ಈ ಮಕ್ಕಳ ಭವಿಷ್ಯ ಮುಂದೆ ಉತ್ತಮವಾಗಿರಲಿ ಎಂದು ಹಾರೈಸಿದರು.
ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿ, ಶಾಲಾ ವಿದ್ಯಾರ್ಥಿ ಜೀವನವು ತುಂಬಾ ಸುಂದರವಾಗಿರುತ್ತದೆ. ವಿದ್ಯಾರ್ಥಿಗಳು ಪಾಠದ ಜೊತೆಆಟೋಟ, ಉತ್ತಮ ಸಂಸ್ಕೃತಿ ಕಲಿತುಕೊಂಡರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಮೈ ಲಿಟ್ಲ್ ವರ್ಲ್ಡ್ ಶಾಲೆಯ ಅಧ್ಯಕ್ಷ ಕೆ.ಆರ್. ಮಹೇಶ್, ಲಯನ್ಸ್ ಕ್ಲಬ್ ಹಿರಿಯರಾದ ತಿಮ್ಮರಾಯ ಶೆಟ್ಟಿ ಮಾತನಾಡಿ, ಕ್ರೀಡಾ ಮನೋಭಾವನೆ ಎಂಬುದು ಚಿಕ್ಕ ವಯಸ್ಸಿನಿಂದಲೇ ಬಂದರೆ ಒಳ್ಳೆಯದು. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಪ್ರತಿ ಮಕ್ಕಳನ್ನೂ ಕ್ರೀಡೆಯತ್ತ ಕರೆದುಕೊಂಡು ಹೋದರೆ ಶಿಕ್ಷಣಕ್ಕೂ ಸಹಕಾರಿ ಆಗಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮೈ ಲಿಟ್ಲ್ ವರ್ಲ್ಡ್ ಫ್ರೀ ಶಾಲೆಯ ಮುಖ್ಯಸ್ಥರು ಹಾಗೂ ನಗರಸಭೆ ಸದಸ್ಯೆ ಅಶ್ವಿನಿ ಮಹೇಶ್ ಮಕ್ಕಳಿಗೆ ಹಿತವಚನ ನೀಡಿದರು. ಬಳಿಕ ಮಕ್ಕಳ ಪೋಷಕರು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆಯ ಮಾತನ್ನು ತಿಳಿಸಿ, ಶಾಲಾ ಮುಖ್ಯಸ್ಥರಾದ ಅಶ್ವಿನಿ ಮಹೇಶ್ ರವರಿಗೆ ಅಭಿನಂದಿಸಿದರು.ಬ್ಯಾಸ್ಕೆಟ್ ಬಾಲ್ ಕ್ರೀಡೆಯ ಕೋಚ್ ಸೋಮಶೇಖರ್ ಸೇರಿ ಇತರರು ಭಾಗವಹಿಸಿದ್ದರು.