ಕನ್ನಡಪ್ರಭ ವಾರ್ತೆ ಹಾಸನ
ನಗರದ ಡೇರಿ ವೃತ್ತದ ಬಳಿ ಇರುವ ಬಿ. ಕಾಟಿಹಳ್ಳಿ ಬಳಿ ಡಿವೈಡರ್ ನಡುವಿನ ಟ್ಯೂಬುಲಾರ್ ಬೀದಿದೀಪ ಅಳವಡಿಸಲು ಕ್ಷೇತ್ರದ ಶಾಸಕ ಸ್ವರೂಪ್ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಎಚ್.ಪಿ. ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ಬಿ. ಕಾಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಹಳ್ಳಿಗಳು ನಗರಸಭೆಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ನಗರಸಭೆ ಅನುದಾನದಲ್ಲಿ ಸುಮಾರು ೫೦ ಲಕ್ಷ ವೆಚ್ಚದಲ್ಲಿ ಟ್ಯೂಬುಲರ್ ಬೀದಿದೀಪ ಅಳವಡಿಕೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಈ ಹಿಂದೆ ಡೇರಿ ವೃತ್ತದಿಂದ ಬಿ ಕಾಟಿಹಳ್ಳಿ ಮಾರ್ಗವಾಗಿ ಒಂದು ಕಿಲೋಮೀಟರ್‌ಗೆ ಮಾತ್ರ ಬೀದಿ ದೀಪ ಅಳವಡಿಸಲಾಗಿತ್ತು. ಆದರೆ ಇದೀಗ ನಗರಸಭೆ ವ್ಯಾಪ್ತಿಗೆ ಬಂದ ನಂತರ ಮತ್ತೆ ಎರಡು ಕಿಲೋಮೀಟರ್ ವ್ಯಾಪ್ತಿಗೆ ಬೀದಿ ದ್ವೀಪಗಳ ಅಳವಡಿಕೆಗೆ ಎಲ್ಲಾ ನಗರಸಭೆ ಸದಸ್ಯರು ಅಧ್ಯಕ್ಷರ ಸಹಯೋಗದಲ್ಲಿ ಮುಂದಾಗಿದ್ದೇವೆ. ಹಾಸನಂಬ ಉತ್ಸವ ಆರಂಭಕ್ಕೂ ಮುನ್ನ ನಗರಕ್ಕೆ ಬೆಳಕು ಕಲ್ಪಿಸಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಸಭೆ ಕರೆದು ತೀರ್ಮಾನಿಸಿ, ಶೀಘ್ರವಾಗಿ ಕೆಲಸ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಬೇಲೂರು ರಸ್ತೆಯ ರಿಂಗ್ ರೋಡ್‌ನಿಂದ ನಗರದ ಸದಾಶಿವ ನಗರದವರೆಗೆ ಬೀದಿದೀಪ ಅಳವಡಿಕೆಗೆ ಈಗಾಗಲೇ ೫೦ ಲಕ್ಷಕ್ಕೆ ಟೆಂಡರ್ ಕರೆಯಲಾಗಿದೆ. ಇದಲ್ಲದೆ ಎಪಿಎಂಸಿಯಿಂದ ರಿಂಗ್ ರಸ್ತೆವರೆಗೆ ಹೆಚ್ಚುವರಿ ೬೭ ಕಂಬಗಳನ್ನು ಅಳವಡಿಸಲು ಯೋಜಿಸಲಾಗಿದೆ. ಜೊತೆಗೆ ಹೊಸ ಬಸ್ ನಿಲ್ದಾಣದಿಂದ ಚನ್ನಪಟ್ಟಣವರೆಗೆ ಕಂಬ ಅಳವಡಿಸಲು ೩೦ ಲಕ್ಷಕ್ಕೆ ಟೆಂಡರ್ ಕರೆಯಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಹಾಸನಾಂಬ ಉತ್ಸವದ ಒಳಗಾಗಿ ಮುಗಿಸಲು ತೀರ್ಮಾನಿಸಲಾಗಿದೆ. ನಗರಸಭೆಗೆ ಸೇರಿದ ೨೫ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ೮೫ ಲಕ್ಷ ವೆಚ್ಚದ ಕಾಮಗಾರಿಗೆ ಈಗಾಗಲೇ ನಗರಸಭೆಯಿಂದ ಟೆಂಡರ್ ಕರೆಯಲಾಗಿದೆ. ಎಲ್ಲೆಲ್ಲಿ ಬೀದಿ ದ್ವೀಪಗಳು ಅಗತ್ಯವಿದೆ ಅಲ್ಲೆಲ್ಲಾ ಬೀದಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಇಂದಿರಾ ನಗರ, ಸತ್ಯಮಂಗಲ, ಕಾಟೆಹಳ್ಳಿ ಕೊಪ್ಪಲು, ಹೌಸಿಂಗ್ ಬೋರ್ಡ್ ಸೇರಿದಂತೆ ವಿವಿಧಡೆ ಅಮೃತ್ ಯೋಜನೆಯನ್ನು ವಿಸ್ತರಿಸಿ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸಲು ಯೋಜಿಸಲಾಗಿದೆ. ಈ ರೀತಿಯ ಹಲವು ಕಾಮಗಾರಿಗಳು ತಮ್ಮ ಮುಂದಿದ್ದು ಅವುಗಳನ್ನೆಲ್ಲ ಅತಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಬಿ. ಕಾಟೀಹಳ್ಳಿಯಲ್ಲಿ ಇರುವ ಕೆಲ ಸಮಸ್ಯೆಗಳ ಬಗ್ಗೆ ಅಲ್ಲಿನ ಗ್ರಾಮಸ್ಥರು ಕೆಲ ಸಮಸ್ಯೆಗಳನ್ನು ಶಾಸಕರಲ್ಲಿ ಹೇಳಿಕೊಂಡರು. ಮುಖ್ಯ ಸಮಸ್ಯೆ ಬಗ್ಗೆ ಗಮನಹರಿಸಿ ಬಗೆಹರಿಸುವ ನಿಟ್ಟಿನಲ್ಲಿ ಮುಂದೆ ಹೋಗುವುದಾಗಿ ಇದೇ ವೇಳೆ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಸದಸ್ಯರಾದ ವಾಸುದೇವ್, ಕಿರಣ್, ಮಂಜುನಾಥ್, ನಗರಸಭೆ ಕಮಿಷನರ್ ನರಸಿಂಹ ಮೂರ್ತಿ, ಮುಖಂಡರಾದ ಚಂದ್ರಣ್ಣ, ಪ್ರಕಾಶ್, ಚಂದ್ರಿಕಾ, ಗಂಗಣ್ಣ, ಸಂತೋಷ್, ಅಧಿಕಾರಿಗಳಾದ ಚನ್ನೇಗೌಡ, ಎಂಜಿನಿಯರ್ ಕವಿತಾ, ಸತೀಶ್ ಇತರರು ಇದ್ದರು.