ಕಾಮಗಾರಿಗೆ ಶಾಸಕ ಸ್ವರೂಪ್ ಗುದ್ದಲಿಪೂಜೆ । ಹಾಸನ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಲು ಮನವಿ ಕನ್ನಡಪ್ರಭ ವಾರ್ತೆ ಹಾಸನ
ಸ್ವಚ್ಛ ಭಾರತ್ ಮಿಷನ್ ಹಂತ -2ರ ಯೋಜನೆಯ ಅಡಿಯಲ್ಲಿ ಹಾಸನ ತಾಲೂಕು ಹನುಮಂತಪುರ ಬಳಿ 1.5 ಕೋಟಿ ವೆಚ್ಚದ ಒಣತ್ಯಾಜ್ಯ ಸಂಪೂರ್ಣ ನಿರ್ವಹಣಾ ಘಟಕ ನಿರ್ಮಾಣಕ್ಕೆ ಭಾನುವಾರ ಶಾಸಕ ಸ್ವರೂಪ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.ಗುದ್ದಲಿಪೂಜೆ ಅಂಗವಾಗಿ ಸ್ಥಳದಲ್ಲಿ ಭೂಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸುತ್ತಮುತ್ತಲು ಗ್ರಾಮದ ಮುಖಂಡರು ಹಾಗೂ ನಗರಸಭೆ ಸದಸ್ಯರು ಶಾಸಕ ಸ್ವರೂಪ ಪ್ರಕಾಶ್ ಅವರಿಗೆ ಸಾಥ್ ನೀಡಿದರು. ಬಳಿಕ ಶಾಸಕ ಸ್ವರೂಪ್ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಕಸದ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತ್ ಮೂಲಕ ಒಂದೂವರೆ ಕೋಟಿ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಕೆಲಸ ಮಾಡಲಿದೆ, ಇದರ ಜೊತೆ ಹಾಸನ ನಗರದ ನಿವಾಸಿಗಳು ಕೂಡ ಸಹಕಾರ ನೀಡಬೇಕು. ಈಗಾಗಲೇ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಕಸದ ವಾಹನದಲ್ಲೇ ಹಾಕಬೇಕು ಎಂಬ ನಿಯಮವಿದೆ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಹಾಸನ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಯಥೇಚ್ಛವಾದ ಕಸದ ಸಮಸ್ಯೆಯಿಂದಲೇ ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುತ್ತಿದೆ. ಅವುಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನದಲ್ಲೇ ಹಾಕಿ ನಗರಸಭೆಯೊಂದಿಗೆ ಕೈಜೋಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ಇದೇ ವೇಳೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಕಸದ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕು, ಸುತ್ತಮುತ್ತಲ ಜನರಿಗೂ ಸಮಸ್ಯೆಯಾಗದಂತೆ ರಕ್ಷಣಾತ್ಮಕವಾಗಿ ಕಾಮಗಾರಿ ನಡೆಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಸೂಚನೆ ನೀಡಿದರು.ಈ ವೇಳೆ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ಸುರೇಶ್, ಕೆಆರ್‌ಡಿಎಲ್ ಅಧಿಕಾರಿಗಳಾದ ಎಇಇ ನವ್ಯಶ್ರೀ, ಇಇ ಅಣ್ಣಯ್ಯ, ಆಗಿಲೆ ಗ್ರಾಮದ ಮುಖಂಡ ಮೊಗಣ್ಣ, ಹೊನ್ನೇಗೌಡ, ಮಾರಗೋಡನಹಳ್ಳಿ ರಾಜಣ್ಣ, ಹನುಮಂತಪುರ ರಾಮಚಂದ್ರ, ಜಗದೀಶ್ , ಬಿದರೆಕೆರೆ ಜಯರಾಮ್, ನಾಗೇಶ್ ಬಿಟ್ಟ ಗೌಡನಹಳ್ಳಿ, ರಾಜಣ್ಣ ಇತರರು ಇದ್ದರು.