ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನಾನು ಇನ್ನೂ ಅಂಬೆಗಾಲು ಇಡುತ್ತಿದ್ದೇನೆ. ರಾಜ್ಯ ರಾಜಕೀಯದ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕನಲ್ಲ. ನನ್ನ ಆದ್ಯತೆ ಹಾಸನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ. ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವುದೇ ನನ್ನ ಮೊದಲ ಆದ್ಯತೆ. ೮೫ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗೆದ್ದಿರುವುದನ್ನೇ ಲಾಟರಿ ಎಂದು ಹೇಳುವುದಾದರೆ, ಹೌದು, ಅದು ಜನರ ಪ್ರೀತಿಯ ಲಾಟರಿ. ಆದರೆ ನಾನು ಲಾಟರಿ ಆಡಿದವನಲ್ಲ. ಲಾಟರಿ ಬಗ್ಗೆ ಅದರ ಆಳ-ಅಗಲ ಗೊತ್ತಿರುವವರು ಮಾತನಾಡುತ್ತಾರೆ. ನನಗೆ ಅದರ ಬಗ್ಗೆ ಯಾವುದೇ ಅನುಭವವಿಲ್ಲ. ನಾನು ಜೀವನದಲ್ಲಿ ಲಾಟರಿ ಆಡಿಲ್ಲ. ಜನರ ಆಶೀರ್ವಾದ ಮತ್ತು ನನ್ನ ತಂದೆಯ ಮಾರ್ಗದರ್ಶನದಿಂದಲೇ ಶಾಸಕನಾಗಿದ್ದೇನೆ ಎಂದು ತಿರುಗೇಟು ನೀಡಿದರು. ತಮ್ಮ ರಾಜಕೀಯ ಹಿನ್ನೆಲೆಯನ್ನು ವಿವರಿಸಿದ ಸ್ವರೂಪ್ ಪ್ರಕಾಶ್, "ನಮ್ಮ ಕುಟುಂಬ ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದೆ. ನಮ್ಮ ತಾತ ಪುರಸಭೆ ಸದಸ್ಯರಾಗಿದ್ದರು. ತಂದೆ ನಾಲ್ಕು ಬಾರಿ ಶಾಸಕರಾಗಿ, ನಗರಸಭೆ ಸದಸ್ಯ ಹಾಗೂ ಅಧ್ಯಕ್ಷರಾಗಿಯೂ ಜನಸೇವೆ ಮಾಡಿದ್ದಾರೆ. ನಾನು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಸಾರ್ವಜನಿಕ ಜೀವನದ ಅನುಭವ ನನಗಿದೆ. ನಮ್ಮ ಕುಟುಂಬದ ರಾಜಕೀಯ ಇತಿಹಾಸ ಗೊತ್ತಿಲ್ಲದವರು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಬಹಳ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದ್ದೇನೆ. ಹಾಸನ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಜನರ ನಾಡಿಮಿಡಿತ ನನಗೆ ಗೊತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಮಾಡಿರುವ ಪ್ರತಿಯೊಂದು ಕಾಮಗಾರಿಯ ಸಂಪೂರ್ಣ ಅಂಕಿ-ಅಂಶವನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ. ಟೀಕೆಗಳಿಗೆ ಮಾತಿನಲ್ಲಿ ಅಲ್ಲ, ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡುತ್ತೇನೆ ಎಂದು ಟಾಂಗ್ ನೀಡಿದರು.ಮೈತ್ರಿ ಧರ್ಮ ಪಾಲಿಸುತ್ತಿದ್ದೇನೆ:
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಧರ್ಮ ಪಾಲನೆ ವಿಚಾರ ಪ್ರಸ್ತಾಪಿಸಿದ ಅವರು, ಯಾರು ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆ, ಯಾರು ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅಗತ್ಯವಿದ್ದರೆ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಲಿ. ವಿಜಯೇಂದ್ರ ಅವರು ಈಗಾಗಲೇ ಆಣೆ ಮಾಡಿ ಬಂದಿದ್ದಾರೆ. ನನ್ನ ಬಗ್ಗೆ ಮಾತನಾಡುವವರೂ ಧರ್ಮಸ್ಥಳಕ್ಕೆ ಹೋಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ಆಣೆ ಮಾಡಲಿ. ಸತ್ಯ ಜನರ ಮುಂದೆ ಬರಬೇಕು ಎಂದು ಸವಾಲು ಹಾಕಿದರು.
ಇದೇ ವೇಳೆ ಜೆಡಿಎಸ್ ಮುಖಂಡರಾದ ಬಿದರಿಕೆರೆ ಜಯರಾಮ್, ಹೊಂಗೆರೆ ರಘು, ಸುರೇಶ್, ಇತುರರು ಉಪಸ್ಥಿತರಿದ್ದರು.