
-20ವರ್ಷದ ಅಧಿಕಾರದಲ್ಲಿ ಮಾಡಿರುವ ಒಂದಾದರೂ ಕೆಲಸವನ್ನು ಜನರ ಮುಂದಿಡಿ।ಶಾಸಕರ ಬಹಿರಂಗ ಸವಾಲು -ಇದು ಕೇವಲ ಟ್ರೈಲರ್, ನಿಮ್ಮ ಬಗ್ಗೆ ಮಾತಾಡಲು ನೂರಾರು ವಿಷಯಗಳಿವೆ, ಎಚ್ಚರಿಕೆ ಎಂದ ಶಾಸಕ ತಮ್ಮಯ್ಯ
ನಿಮ್ಮಷ್ಟು ದೊಡ್ಡ ನಾಯಕನಲ್ಲ, ಮುಖ್ಯಮಂತ್ರಿ ಅಭ್ಯರ್ಥಿಯೂ ಅಲ್ಲ, ಎರಡು ಬಾರಿ ಸಚಿವನಾಗಿಲ್ಲ. ಆದರೆ, ಸಿಕ್ಕ ಮೊದಲ ಅವಕಾಶದಲ್ಲೇ ಚಿಕ್ಕಮಗಳೂರಿಗೆ ಕನಿಷ್ಠ ಎರಡು ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗುತ್ತೇನೆ. 20ವರ್ಷ ಅಧಿಕಾರದಲ್ಲಿದ್ದ ನೀವು ಕ್ಷೇತ್ರಕ್ಕೆ ಮಾಡಿರುವ ಒಂದಾದರೂ ಮಹತ್ವದ ಕೆಲಸವನ್ನು ಜನರ ಮುಂದಿಡಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅವರು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಇದು ಕೇವಲ ಟ್ರೈಲರ್ ಅಷ್ಟೇ. ನಿಮ್ಮ ಬಗ್ಗೆ ಮಾತನಾಡಲು ನೂರಾರು ವಿಷಯಗಳಿವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.ಬೆಳವಾಡಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು ಹರಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಗುರುವಾರ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಸಿ.ಟಿ.ರವಿ ಅವರ ಹೆಸರು ಬಳಸದೇ ವಾಗ್ದಾಳಿ ನಡೆಸಿದರು. ಕಳೆದ ಮೂರು ವರ್ಷಗಳಿಂದ ಹಲವು ಆರೋಪಗಳನ್ನು ಮಾಡುತ್ತಿದ್ದರೂ ಮೌನವಾಗಿದ್ದೆ. ಆದರೆ, ಸುಳ್ಳು ಆರೋಪಗಳನ್ನು ಪದೇಪದೇ ಹೇಳಿ ಜನರನ್ನು ನಂಬಿಸುವ ಪ್ರಯತ್ನ ನಡೆಯುತ್ತಿರುವುದರಿಂದ ಸ್ಪಷ್ಟನೆ ನೀಡಬೇಕಾಗಿದೆ ಎಂದು ತಮ್ಮಯ್ಯ ಹೇಳಿದರು.
‘ನಾವು’ ಎಂಬುದನ್ನು ಕಲಿಯಿರಿ:
2004, 2008, 2013, 2018 ಹಾಗೂ 2023ರ ಚುನಾವಣೆಗಳ ಸಿ.ಟಿ.ರವಿ ಅವರ ಕರಪತ್ರಗಳನ್ನು ಪರಿಶೀಲಿಸಿದರೆ ಅವರ ಅಭಿವೃದ್ಧಿ ಸಾಧನೆಗಳ ಕುರಿತು ಜನರೇ ತೀರ್ಮಾನಿಸಬಹುದು. ಅವುಗಳಲ್ಲಿ ಅವರ ಫೋಟೋ ಹೊರತುಪಡಿಸಿ ಬೇರೇನೂ ಇಲ್ಲ ಎಂದು ಕಿಡಿಕಾರಿದರು.
ಕೆಲವರು ಪೇಪರ್ ಟೈಗರ್ ಹಾಗೂ ಫೇಸ್‌ಬುಕ್ ಹುಲಿಗಳಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನ್ನ ಬಡಿಸಿದರೆ ಹೊಟ್ಟೆ ತುಂಬುವುದಿಲ್ಲ. ಪೇಪರ್‌ನಲ್ಲಿ ನೀರು ಹರಿಸಿದ್ದೇವೆ ಎಂದು ಹೇಳಿದರೆ ಜನರಿಗೆ ಕುಡಿಯಲು ನೀರು ಸಿಗಲ್ಲ. ನಿಜವಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಪೇಪರ್ ಟೈಗರ್ ಅಲ್ಲ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರ ಬದುಕಿಗೆ ಸರ್ಕಾರ ಆಧಾರವಾಗಿದೆ ಎಂದರು.
ಬೆಳವಾಡಿ ಕೆರೆಗೆ ನೀರು ತುಂಬಿಸುವ ಅವಕಾಶ ಮೂಲ ಯೋಜನೆಯಲ್ಲಿ ಇರಲಿಲ್ಲ. 20 ವರ್ಷ ಶಾಸಕರಾಗಿ, ಸಚಿವರಾಗಿ ಅಧಿಕಾರದಲ್ಲಿದ್ದಾಗ ನೀರಿನ ಹಂಚಿಕೆ ಮಾಡಿಸಲು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ಈಗ ನೀರಿನ ಹಂಚಿಕೆ ಮಾಡಿಸಿ ಎಂದು ಕೇಳುತ್ತಿರುವುದು ಎಷ್ಟು ಸರಿ? ನೀವು ಅಷ್ಟು ದೊಡ್ಡ ನಾಯಕನಾಗಿದ್ದರೆ ಅಧಿಕಾರದಲ್ಲಿದ್ದಾಗಲೇ ಮಾಡಬೇಕಿತ್ತು ಎಂದು ತಿರುಗೇಟು ನೀಡಿದರು.
ಬೆಳವಾಡಿ ಕೆರೆಗೆ ನೀರು:
ಎತ್ತಿನಹೊಳೆ ಯೋಜನೆಯಿಂದ ಬೆಳವಾಡಿ ಕೆರೆ ಮಾತ್ರವಲ್ಲದೆ ದೇವನೂರು, ಮಾಚೇನಹಳ್ಳಿ ಹಾಗೂ ಗೂರೂರು ಭಾಗದ ಕೆರೆಗಳಿಗೂ ನೀರು ಹರಿಯುತ್ತಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಚುನಾವಣೆಗೂ ಮುನ್ನ ಈ ಭಾಗಕ್ಕೆ ನೀರು ತರುವುದಾಗಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಬೆಳವಾಡಿ ಮತ್ತು ವಡ್ಡರಹಳ್ಳಿ ಕೆರೆ ಸೇರಿದಂತೆ ಈ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡುವುದು ಸರ್ಕಾರದ ಆಶಯ ಎಂದು ತಿಳಿಸಿದರು.
ಬೆಳವಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಸಿರಾಜ್ ಉನ್ನಿಸಾ, ಮುಖಂಡರಾದ ವಿನಾಯಕ್ ಸಿಂದಿಗೆರೆ, ಅಮೀರ್ ಜಾನ್, ಭಾಗ್ಯ ಚಂದ್ರಶೇಖರ್, ಕಲ್ಪನಾ ಹರೀಶ್, ಸುಶೀಲಾ ಕೃಷ್ಣಮೂರ್ತಿ, ಪರಮೇಶಣ್ಣ, ಶಂಕರ್ ನಾಯ್ಕ್, ನಾಗೇಗೌಡ, ಆನಂದಣ್ಣ, ಕೃಷ್ಣಮೂರ್ತಿ, ದೇವರಾಜ್ ಹಾಗೂ ಜಗ್ಗದೀಶ್ ಇದ್ದರು......ಬಾಕ್ಸ್.....
₹5 ಸಾವಿರ ಕೋಟಿ ತಂದಿದ್ದರೆ ಸಿಂಗಾಪುರವಾಗ್ತಿತ್ತು..2018ರಿಂದ 2023ರ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ 5 ಸಾವಿರ ಕೋಟಿ ಅನುದಾನ ತಂದಿದ್ದೇನೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿಜವಾಗಿಯೂ 5 ಸಾವಿರ ಕೋಟಿ ತಂದಿದ್ದರೆ ಚಿಕ್ಕಮಗಳೂರು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಿಂಗಾಪುರವಾಗಿರುತ್ತಿತ್ತು ಎಂದು ಶಾಸಕರು ವ್ಯಂಗ್ಯವಾಡಿದರು. ಕೆಲವು ಅನುದಾನಗಳು ಬಂದಿರಬಹುದು. ಆದರೆ, ಬಂದ ಅನುದಾನ ಅವರ ಭಾವ ಸುದರ್ಶನ್ ಖಾತೆಗೆ ಹೋಗಿ ಸೇರಿದೆ. ಜನ ಕಲ್ಯಾಣಕ್ಕೆ ಬಳಕೆಯಾಗಿಲ್ಲ ಎಂದು ಆರೋಪಿಸಿದರು.
....ಬಾಕ್ಸ್....ತಾಕತ್ತಿದ್ದರೆ ಸಂಘದ ಕಚೇರೀಲಿ ಬಸವಣ್ಣ, ಅಂಬೇಡ್ಕರ್ ಪೋಟೋ ಹಾಕಿ..ನಿಮಗೆ ತಾಕತ್ತಿದ್ದರೆ ಬಸವಣ್ಣ, ಅಂಬೇಡ್ಕರ್ ಹಾಗೂ ಕನಕದಾಸರ ಭಾವಚಿತ್ರಗಳನ್ನು ನಿಮ್ಮ ಸಂಘದ ಕಚೇರಿಯಲ್ಲಿ ಇಡಿ ಎಂದು ತಮ್ಮಯ್ಯ ನೇರ ಸವಾಲು ಹಾಕಿದರು. ದೊಡ್ಡವರ ಬಗ್ಗೆ ಮಾತನಾಡಿದರೆ ತಾವೂ ದೊಡ್ಡವರಾಗುತ್ತೇವೆ ಎಂದು ಭಾವಿಸುವುದು ತಪ್ಪು. ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾ ಖಾನ್ ಎಂದು ಹೇಳಿ ಮನೆಗೆ ಹೋಗಿ ಕಾಲಿಗೆ ಬಿದ್ದು ಬಂದಿದ್ದೀರಾ, ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಷ್ಟೊಂದು ಮಾತನಾಡಿ, ತೋಟದ ಮನೆಯಲ್ಲಿ ಕಾಲು ಹಿಡಿದುಕೊಂಡಿದ್ದು ಗೊತ್ತಿದೆ. ಅದೇ ರೀತಿ ಯಡಿಯೂರಪ್ಪ, ದೇವಗೌಡರ ಬಗ್ಗೆ ಏನೆಲ್ಲಾ ಮಾತನಾಡಿದ್ದೀರಾ ಗೊತ್ತಿದೆ. ಇನ್ನಾದರೂ ಬುದ್ಧಿ ಕಲಿತು ಮಾತನಾಡಿ ಎಂದು ಎಚ್ಚರಿಕೆ ನೀಡಿದರು.
ಫೋಟೊಚಿಕ್ಕಮಗಳೂರು ಬೆಳವಾಡಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು ಹರಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಗುರುವಾರ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮ.