ಸಾರ್ವಜನಿಕ ಆಸ್ಪತ್ರೆ ಹೆರಿಗೆ ವಿಭಾಗದ ಕಟ್ಟಡ ನವೀಕರಣ ಕಾಮಗಾರಿಗೆ ಶಾಸಕ ಉದಯ್ ಚಾಲನೆ

KannadaprabhaNewsNetwork | Published : May 24, 2025 12:15 AM
ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹ, ಮತ್ತು ಸಾಂಸಾರಿಕ ಸಮಸ್ಯೆ ಮತ್ತಿತರ ಕಾರಣಗಳಿಂದ ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹೆರಿಗೆ ವಿಭಾಗದ ಕಟ್ಟಡ ನವೀಕರಣಕ್ಕೆ ಆರೋಗ್ಯ ಇಲಾಖೆ 1.30 ಲಕ್ಷ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಂ. ಉದಯ್ ಶುಕ್ರವಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹೆರಿಗೆ ವಿಭಾಗದ ಕಟ್ಟಡ ನವೀಕರಣ, ವಸತಿಗೃಹ ಹಾಗೂ ಮೂಲ ಸೌಲಭ್ಯಗಳ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಆಸ್ಪತ್ರೆ ಹೆರಿಗೆ ವಿಭಾಗದ ವಾರ್ಡ್ ಗಳ ಮೇಲ್ಛಾವಣಿ, ಶೌಚಾಲಯಗಳು ಬಹಳ ವರ್ಷಗಳಿಂದ ದುರಸ್ತಿಯಾಗದ ಕಾರಣ ಶಿಥಿಲಾವಸ್ಥೆಯಲ್ಲಿದ್ದವು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳ ಕುರಿತು. ದುರಸ್ತಿಗೆ ಅಗತ್ಯ ಅನುದಾನದ ಅಂದಾಜು ಪಟ್ಟಿ ತಯಾರಿಸಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ಆನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದೆ. ಮನವಿಗೆ ಸ್ಪಂದಿಸಿದ ಸಚಿವರು ಆಸ್ಪತ್ರೆ ನವೀಕರಣಕ್ಕೆ 1.30 ಲಕ್ಷ ರು. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಮುಂದಿನ ಮೂರು ತಿಂಗಳಲ್ಲಿ ಹೆರಿಗೆ ಆಸ್ಪತ್ರೆ ಮೇಲ್ಛಾವಣಿ ದುರಸ್ತಿ, ಶೌಚಾಲಯ ನವೀಕರಣ, ನೀರಿನ ವ್ಯವಸ್ಥೆ ಮತ್ತು ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹ, ಮತ್ತು ಸಾಂಸಾರಿಕ ಸಮಸ್ಯೆ ಮತ್ತಿತರ ಕಾರಣಗಳಿಂದ ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ವೇಳೆ ಇಲ್ಲೇ ಉಳಿದುಕೊಳ್ಳಲು ವಸತಿಗೃಹ ಕಲ್ಪಿಸುವುದು ಅತ್ಯಗತ್ಯ. ಇದರಿಂದ ಗ್ರಾಮೀಣ ಪ್ರದೇಶದಿಂದ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಮದ್ದೂರು ಹಾಗೂ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರು ಮತ್ತು ಸಿಬ್ಬಂದಿಯ ನೇಮಕದ ಅಧಿಕಾರವನ್ನು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ.ಗೌಡ, ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಪುರಸಭಾ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಪ್ರಮೀಳಾ, ಸರ್ವಮಂಗಳ, ಸಚಿನ್, ಬಸವರಾಜು, ಸಿದ್ದರಾಜು ಮತ್ತಿತರರು ಇದ್ದರು.