ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಮೆಸ್ಕಾಂ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಸಿದರು.
ಮಳೆ, ಗಾಳಿ ಸಂದರ್ಭ ಕಡಿತಗೊಳ್ಳುವ ವಿದ್ಯುತ್ ಸಂಪರ್ಕಗಳನ್ನು ಶೀಘ್ರ ಮರುಸ್ಥಾಪನೆಗೆ ಆದ್ಯತೆ ನೀಡಿ, ದಾರಿ ದೀಪ ನಿರ್ವಹಣೆ, ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ ಹಾಗೂ ತುರ್ತು ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಹದಗೆಟ್ಟಿರುವ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ತುರ್ತು ರಿಪೇರಿಗೆ, ರಾ.ಹೆ. 66ರಲ್ಲಿ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು, ಸಂತೆಕಟ್ಟೆ ಅಂಡರ್ ಪಾಸ್, ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಹಾಗೂ ಮಂಜೂರಾತಿಗೊಂಡಿರುವ ಸರ್ವೀಸ್ ರಸ್ತೆ ಕಾಮಗಾರಿ ತಕ್ಷಣ ಪ್ರಾರಂಭಿಸಲು ಹಾಗೂ ರಾಹೆ 169ಎ ಕೆಳಪರ್ಕಳ ರಸ್ತೆ ಕಾಂಕ್ರೀಟಿಕರಣ, ಇಂದ್ರಾಳಿ ರೈಲ್ವೇ ಬ್ರಿಡ್ಜ್, ಮಲ್ಪೆ - ಆದಿಉಡುಪಿ ಕಾಮಗಾರಿ ಆದ್ಯತೆಯ ಮೇರೆಗೆ ನಡೆಸಲು ತಿಳಿಸಿದರು.ನಗರಸಭಾ ವ್ಯಾಪ್ತಿಯ ವಾರಾಹಿ ಯೋಜನೆಯ ಮೂಲಕ ಒಪ್ಪಂದದಂತೆ ಎಲ್ಲಾ ವಾರ್ಡ್ ಗಳಿಗೆ ಕುಡಿಯುವ ನೀರು 24 ಗಂಟೆ ನಿರಂತರ ಸರಬರಾಜಿಗೆ ಕ್ರಮ ವಹಿಸಿ, ಅನಿವಾರ್ಯ ಕಾರಣಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾದಾಗ ತಕ್ಷಣ ಕ್ರಮ ವಹಿಸುವಂತೆ ಸೂಚನೆ ನೀಡಿದರು.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನಲ್ಲಿ ನಿರ್ಮಿಸಿರುವ ನೂತನ ವಸತಿ ಸಮುಚ್ಛಯದ ಕಾಮಗಾರಿಯ ಪ್ರಗತಿ ಹಾಗೂ ರಸ್ತೆ, ಚರಂಡಿ, ದಾರಿದೀಪ ಸಹಿತ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು.ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.