ಶಾಸಕರು ಗರಂ, ಉಸ್ತುವಾರಿ ಸಚಿವರು ನರಂ

KannadaprabhaNewsNetwork |  
Published : Jul 19, 2025, 02:00 AM ISTUpdated : Jul 19, 2025, 01:29 PM IST
18ಕೆಪಿಆರ್‌ಸಿಆರ್‌ 03 | Kannada Prabha

ಸಾರಾಂಶ

ಹಲವಾರು ವಿಚಾರಗಳಿಗೆ ಶಾಸಕರು ಗರಂಗೊಂಡಿದ್ದನ್ನು ಕಂಡು ಉಸ್ತುವಾರಿ ಸಚಿವರ ನರಂ, ಟೋಲ್‌ ಗೇಟ್‌ ನಿಲ್ಲಿಸುವಂತೆ ಒತ್ತಾಯಿಸಿ ಶಾಸಕಿಯಿಂದ ಮಿಂಚಿನ ಧರಣಿ 

 ರಾಯಚೂರು :  ಹಲವಾರು ವಿಚಾರಗಳಿಗೆ ಶಾಸಕರು ಗರಂಗೊಂಡಿದ್ದನ್ನು ಕಂಡು ಉಸ್ತುವಾರಿ ಸಚಿವರ ನರಂ, ಟೋಲ್‌ ಗೇಟ್‌ ನಿಲ್ಲಿಸುವಂತೆ ಒತ್ತಾಯಿಸಿ ಶಾಸಕಿಯಿಂದ ಮಿಂಚಿನ ಧರಣಿ, ವೇದಿಕೆ ಮೇಲಿದ್ದ ಸಚಿವರು, ಶಾಸಕರು ಮತ್ತು ಮುಂಭಾಗದ ಮೊದಲ ಸಾಲಿನಲ್ಲಿ ಕುಳಿತಿದ್ದ ಶಾಸಕರು, ವಿಧಾನ ಪರಿಷತ್‌ ಸದಸ್ಯರ ನಡುವೆ ವಾಗ್ವಾದ, ಅಸಮಾಧಾನ, ಏಕವಚನದ ಪದಗಳ ಬಳಕೆ, ಕೈ ಹಿಡಿದು ಕುಳಿತುಕೊಳ್ಳಿ ಎಂದು ಹೇರು ಧ್ವನಿಯಲ್ಲಿ ಟೇಬಲ್‌ ತಟ್ಟಿ ಮಾತಿನ ಚಕಮಕಿ, ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದರೆ ಡಿಎಫ್‌ಒ ಪ್ರವೀಣ್‌.ಎಸ್‌ ಅವರಿಂದ ಮೊಬೈಲ್‌ ನಲ್ಲಿ ರಮ್ಮಿ ಆಟ ವಿಷಯದ ಅರಿತ ಉಸ್ತುವಾರಿ ಸಚಿವರಿಂದ ಡಿಎಫ್‌ಒಗೆ ಗೇಟ್‌ ಪಾಸ್‌, ನೋಟೀಸ್‌ ಜಾರಿಗೆ ಸೂಚನೆಹೀಗೆ ಇಡೀ ದಿನ ವಾಗ್ವಾದ, ಗದ್ದಲ-ಗೊಂದಲ, ಅಸಮಾಧಾನ, ಆಕ್ರೋಶ, ಸಲಹೆ-ಸೂಚನೆ, ಸಮಸ್ಯೆಗಳು ಪರಿಹಾರ ಕ್ರಮಗಳು, ಸುಧಾರಣೆ ಯೋಜನೆಗಳ ಸಮಾಲೋಚನೆಗಳಿಗೆ ಸ್ಥಳೀಯ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯು ವೇದಿಕೆ ಕಲ್ಪಿಸಿತ್ತು.

ಸ್ವ-ಪಕ್ಷದ ಶಾಸಕರಿಂದಲೇ ಕ್ಲಾಸ್: ಸಭೆ ಆರಂಭದಲ್ಲಿ ಉಸ್ತುವಾರಿ ಸಚಿವರ ಕಾರ್ಯವೈಖರಿ, ಅಧಿಕಾರಿಗಳ ನಿರ್ಲಕ್ಷ್ಯ, ಅಭಿವೃದ್ಧಿ ವಿಚಾರ, ಅಧಿಕಾರಿಗಳನ್ನು ಹಿಂದೆ ಹಾಕಿಕೊಂಡು ಬರುವುದು, ರೈತರ ಮೇಲೆ ಪೊಲೀಸ್‌ ದೌರ್ಜನ್ಯ, ಅಕ್ರಮ ದಂಧೆಗಳ ಕಡಿವಾಣ ಸೇರಿದಂತೆ ಹಲವಾರು ಸಂಗತಿಗಳಿಂದ ಬೇಸರಗೊಂಡಿದ್ದ ಆಡಳಿತರೂಢ ಸ್ವ-ಪಕ್ಷ ಕಾಂಗ್ರೆಸ್ ಮಸ್ಕಿ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಅವರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರ ವಿರುದ್ಧವೇ ನೇರವಾಗಿ ಅಸಮಾಧಾನ, ಬೇಸರ ವ್ಯಕ್ತಪಡಿಸಿ ಉಸ್ತುವಾರಿ ಸಚಿವರು ಉಳಿದ ಶಾಸಕರು, ಎಂಎಲ್ಸಿ ಹಾಗೂ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು.

ಜಿಲ್ಲೆಯಲ್ಲಿ ಕೈಗೊಂಡಿರುವ ಜಲಾಧಾರೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿವೆ. ಶಾಸಕರಿಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾಹಿತಿ ನೀಡುತ್ತಿಲ್ಲ, ನೀವು (ಉಸ್ತುವಾರಿ ಸಚಿವರು) ಅಧಿಕಾರಿಗಳ ಬೆಂಬಲಕ್ಕೆ ನಿಂತಿದ್ದೀರಿ ಎಂದು ದೂರಿದರು.ಸಭೆಯಲ್ಲಿ ಅನ್ಯ ವಿಷಯ ಚರ್ಚೆ ಜೊತೆಗೆ ಅಕ್ರಮ ಮರಳು ದಂಧೆ, ಮಟ್ಕಾರ, ಇಸ್ಪೇಟ್‌ ವಿಷಯದ ಕುರಿತು ಮಾತನಾಡಬೇಕು ಎಂದು ಶಾಸಕ ಬಸನಗೌಡ ದದ್ದಲ್‌, ಎಂಎಲ್ಸಿ ಎ.ವಸಂತ ಕುಮಾರ ಅವರು ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಎಂಎಲ್ಸಿ ಬಸನಗೌಡ ಬಾದರ್ಲಿ ಹಾಗೂ ಶರಣಗೌಡ ಪಾಟೀಲ್‌ ಬಯ್ಯಾಪುರ ಅವರ ನಡುವೆ ಕೆಲಕಾಲ ತೀವ್ರ ಮಾತಿನ ಚಕಮಕಿ ಸಾಗಿತು. 

ಶಾಸಕಿಯಿಂದ ದಿಢೀರ್ ಧರಣಿ: ದೇವದುರ್ಗ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ 40 ಕಿಮೀ ಒಳಗಡೆ ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು ಅಲ್ಲಿ ವರೆಗೆ ನಾನು ಮೇಲೆ ಹೇಳುವುದಿಲ್ಲ ಎಂದು ಜೆಡಿಎಸ್‌ ಶಾಸಕ ಕರೆಮ್ಮ ಜಿ.ನಾಯಕ ಅವರು ಸಭಾಂಗಣದ ನೆಲದ ಮೇಲೆ ಕುಳಿತು ದಿಢೀರ್‌ ಧರಣಿ ನಡೆಸಿದರು. ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವರು ತಕ್ಷಣ ಟೋಲ್‌ ಗೇಟ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು. ಮುಂದೆ ಯಾವ ರೀತಿಯ ಕ್ರಮ ವಹಿಸಬೇಕು ಎನ್ನುವುದರ ಕುರಿತು ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿದರು. ಇದರಿಂದ ಶಾಸಕಿ ಕರೆಮ್ಮ ಮೇಲೆದ್ದು ಖುರ್ಚಿ ಮೇಲೆ ಕುಳಿತುಕೊಂಡರು. 

ಡಿಒಎಫ್ ರಮ್ಮಿಯಲ್ಲಿ ಮಗ್ನ!ಸಭೆಯ ಒಂದು ಕಡೆ ಶಾಸಕರು ರೇಗಾಡುತ್ತಿದ್ದರೇ ಮತ್ತೊಂದು ಕಡೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಪ್ರವೀಣ.ಎಸ್ ಅವರು ತಮ್ಮ ಮೊಬೈಲ್‌ ನಲ್ಲಿ ರಮ್ಮಿ ಆಟದಲ್ಲಿ ತೊಡಗಿದ್ದರು. ಗಂಭೀರವಾಗಿ ಸಾಗಿದ್ದ ಕೆಡಿಪಿ ಸಭೆಯ ಆಗುಹೋಗುಗಳ ಬಗ್ಗೆ ಆಲಿಸದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಅವರು ರಮ್ಮಿಯಲ್ಲಿ ಮಗ್ನರಾಗಿದ್ದರು. ಅವರು ರಮ್ಮಿ ಆಟವಾಡುತ್ತಿದ್ದ ದೃಶ್ಯಗಳು ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಅದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ.ಎಸ್ ಅವರನ್ನು ಎದ್ದು ನಿಲ್ಲಿಸಿ ವಿವರಣೆ ಕೇಳಿದರು.ಅತ್ಯಂತ ಮಹತ್ವದ ಕೆಡಿಪಿ ಸಭೆಯಲ್ಲಿ ಶಿಸ್ತಿನಿಂದ ಭಾಗಿಯಾಗದೇ ಮೋಬೈಲನಲ್ಲಿ ತಲ್ಲೀಣರಾಗಿ ಅಸಭ್ಯ ವರ್ತನೆ ತೋರಿರುವುದು ಅಕ್ಷಮ್ಯ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿ ಪ್ರವೀಣ ಅವರು ಕ್ಷಮೆ ಕೇಳಿದರು ಸಹ ಸಚಿವರು ಅವರನ್ನು ಸಭೆಯಿಂದ ಹೊರ ಕಳುಹಿಸಿದರು, ಅಧಿಕಾರಿಯ ಅಸಭ್ಯ ಕಾರ್ಯವೈಖರಿಯ ಬಗ್ಗೆ ನೋಟೀಸ್ ಜಾರಿ ಮಾಡಿ ಶಿಸ್ತಿನ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.

 ಡಿಸಿಯಿಂದ ಉಡಾಫೆ ಪದ ಬಳಕೆ,ಶಾಸಕರಿಂದ ಖಡಕ್‌ ವಾರ್ನಿಂಗ್

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾದೀನ ಪಡಿಸಿಕೊಳ್ಳುವ ವಿಚಾರವಾಗಿ ರೈತರ ಮೇಲೆ ಅಧಿಕಾರಿ, ಪೊಲೀಸ್‌ ದೌರ್ಜನ್ಯ ಮಾಡಿರುವುದರ ಕುರಿತು ಎಂದು ಶಾಸಕ ಆರ್‌.ಬಸನಗೌಡ ತುರ್ವಿಹಾಳ ಸಭೆಯಲ್ಲಿ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಡಿಸಿ ನಿತೀಶ್‌ ಕೆ. ಅವರು ಅಧಿಕಾರಿಗಳು ರೈತರೊಂದಿಗೆ ಮೂರ್ನಾಲ್ಕು ಸಲ ಸಭೆ ನಡೆಸಿದ್ದಾರೆ, ಭೂ ಪರಿಹಾರ ವಿಚಾರವಾಗಿ ಕೋರ್‌ಗೆ ಹೋಗಿದ್ದಾರೆ, ಮನವೊಲಿಸಲು ಹೋದಾಗ ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಂತೆಯೇ ಸಿಟ್ಟಿಗೆದ್ದ ಶಾಸಕರು ರೈತರ ಬಗ್ಗೆ ಹಗುರವಾದ ಪದ ಬಳಕೆ ಮಾಡಬೇಡಿ ಎಂದು ವಾರ್ನಿಂಗ್‌ ಕೊಟ್ಟರು. ದೇಶದ ಬೆನ್ನೆಲುಬು ರೈತ, ಅವರ ಕುರಿತು ಈ ರೀತಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿವಿದರು. 

ಎಸ್ಪಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರುಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಹೊರವಲಯ ಭಾರತ ಮಾಲಾ ಯೋಜನೆ ಅಡಿಯಲ್ಲಿ ಬೆಳಗಾವಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ-748ಎ(ಎನ್ಎಚ್)ಗಾಗಿ ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವಾಗ ಪೊಲೀಸರು ರೈತರ ಮೈ ಮುಟ್ಟಿ, ಎದೆಯ ಅಂಗಿ ಹಿಡಿದು, ಹಲ್ಲೆ ಮಾಡಿ ದೌರ್ಜನ್ಯ ಮಾಡಿರುವ ವಿಚಾರವಾಗಿ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಎಸ್ಪಿ ಎಂ.ಪುಟ್ಟಮಾದಯ್ಯ ಅವರ ವಿರುದ್ಧ ರೇಗಾಡಿದರು.

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದು, ರೈತರ ಮೇಲೆ ದೌರ್ಜನ್ಯ ಮಾಡುವುದರ ಮುಖಾಂತರ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಮಾಡಲಾಗುತ್ತಿದೆ. ಭೂ ಸ್ವಾಧೀನ ಪಡೆಯುವಾಗ ರೈತರ ಮನವೋಲಿಸಬೇಕು ಅದೂ ಆಗದೇ ಇದ್ದಲ್ಲಿ ಬಂಧಿಸಬೇಕು ಅದನ್ನು ಬಿಟ್ಟು ಅವರ ಮೇಲೆ ಹಲ್ಲೆ-ದೌರ್ಜನ್ಯ ಮಾಡಿ ಅನ್ನದಾತರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Read more Articles on

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ