ಕನ್ನಡಪ್ರಭ ವಾರ್ತೆ ತಿಪಟೂರು
ನಗರದಲ್ಲಿ ನೀರಿನ ಸಮಸ್ಯೆ ಉದ್ಬವಿಸಿದ್ದು, ಇಲ್ಲಿನ ಶಾಸಕ ಕೆ. ಷಡಕ್ಷರಿಗೆ ಜನತೆಯ ಮೇಲೆ ಸ್ವಲ್ಪವೂ ಕಾಳಜಿಯಿಲ್ಲದಂತಾಗಿದೆ. ನಗರದಲ್ಲಿ ನೀರಿನ ಸಮಸ್ಯೆಯುಂಟಾಗಲು ಇವರ ಬೇಜವಾಬ್ದಾರಿಯೇ ಕಾರಣ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೇಸಿಗೆ ಪ್ರಾರಂಭಕ್ಕೂ ಮುಂಚೆಯೇ ನೀರಿಗೆ ಹಾಹಾಕಾರ ಉಂಟಾಗಿದೆ. ಕಳೆದ ಒಂದು ತಿಂಗಳಿನಿಂದಲೂ ಹೇಮಾವತಿ ನೀರನ್ನು ನಿಲ್ಲಿಸಲಾಗಿದ್ದು, ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ ಮುಂಜಾಗೃತ ಕ್ರಮ ವಹಿಸಬೇಕಿತ್ತು. ನಗರದಲ್ಲಿರುವ ಎಷ್ಟೋ ಬೋರ್‌ವೆಲ್‌ಗಳು ನೀರಿಲ್ಲದೇ ಒಣಗಿ ಹೋಗಿವೆ. ಹಣವುಳ್ಳವರು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದು ಬಡವರು, ಕೂಲಿ ಕೆಲಸ ಮಾಡುವವರ ಗತಿ ಏನು? ಶಾಸಕರು ಕುಡಿಯುವ ನೀರಿಗಾಗಿ ಯಾವ ಅನುದಾನವನ್ನೂ ತಂದಿಲ್ಲ. ನೀರಿಗೆ ಬರ ಬಂದಾಗ ಬೋರ್‌ವೆಲ್ ಕೊರೆಸುತ್ತೇವೆಂದು ಹೇಳುತ್ತಿದ್ದಾರೆ. ತಿಪಟೂರು ಅಮಾನಿಕೆರೆಯಲ್ಲಿ ನೀರಿಲ್ಲದ ಕಾರಣ ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಲಕ್ಷಾಂತರ ರು. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿದರೂ ಪ್ರಯೋಜನವಿಲ್ಲ ಎಂದು ಹೇಳಿದರು.
೬೦ಲಕ್ಷ ರು. ಖರ್ಚು ಮಾಡಿ ಎಸ್‌ಟಿಪಿ ಘಟಕದ ಮೋಟಾರ್ ದುರಸ್ತಿ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು ಸಾಧ್ಯವಾಗದ ಶಾಸಕರು, ಈಗ ಕೋಟ್ಯಾಂತರ ರು. ಖರ್ಚು ಮಾಡಿ ನೊಣವಿನಕೆರೆಯಿಂದ ನಗರಕ್ಕೆ ನೀರು ತರುತ್ತೇನೆಂದು ಹೊರಟಿದ್ದಾರೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯಯವಾಗಲಿದೆಯೇ ಹೊರತು ನೀರಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಆದ್ದರಿಂದ ತ್ವರಿತವಾಗಿ ನೀರಿನ ಅಭಾವದ ಬಗ್ಗೆ ಸರ್ಕಾರ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ನಗರ ವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಬೇಕೆಂದು ಆಗ್ರಹಿಸಿದರು.ವಿದ್ಯುತ್ ಕಣ್ಣಾಮುಚ್ಚಾಲೆ:
ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ನೀಡದ ಕಾರಣ ರೈತರು ತೋಟಗಳಿಗೆ ನೀರುಣಿಸಲು ಹೆಣಗಾಡಬೇಕಾದ ಪರಿಸ್ಥಿತಿ ತಲೆದೋರಿದ್ದು, ಯಾವಾಗ ಕರೆಂಟ್ ಇರುತ್ತದೆ, ಮತ್ಯಾವಾಗ ಕೈಕೊಡುತ್ತದೆ ಎಂಬ ಮಾಹಿತಿಯೂ ಬೆಸ್ಕಾಂನಿಂದ ಇಲ್ಲದ್ದರಿಂದ ರೈತರ ಪಾಡು ಹೇಳತೀರದಾಗಿದೆ. ರೈತರ ಜೀವನಾಡಿ ತೆಂಗು, ಅಡಿಕೆ ನೀರಿಲ್ಲದೆ ಸೊರಗುತ್ತಿದ್ದು, ಬೆಸ್ಕಾಂ ಸಮರ್ಪಕ ಕರೆಂಟ್ ನೀಡಬೇಕು. ರೈತರು ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ ಲಕ್ಷಾಂತರ ರು. ಖರ್ಚು ಮಾಡಬೇಕಿದ್ದು ಈ ಬಗ್ಗೆ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದರು.