ದಸರಾ ಮಹೋತ್ಸವ ಪೂರ್ವಭಾವಿ ಸಭೆಗೆ ಶಾಸಕರು, ಡೀಸಿ ಗೈರು: ಸಾರ್ವಜನಿಕರ ಒತ್ತಾಯದಿಂದ ಸಭೆ ಮುಂದೂಡಿಕೆ

KannadaprabhaNewsNetwork |  
Published : Sep 07, 2025, 01:00 AM IST
6ಕೆಎಂಎನ್ ಡಿ26 | Kannada Prabha

ಸಾರಾಂಶ

ಪ್ರತಿ ಬಾರಿ ದೊಡ್ಡ ಮನರಂಜನೆ ಹೆಸರಿನಲ್ಲಿ ದೊಡ್ಡ ದೊಡ್ಡ ಚಿತ್ರ ನಟರನ್ನು ಸಂಗೀತ, ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಹೆಚ್ಚಿನ ಹಣವನ್ನು ಸ್ಥಳದಲ್ಲೇ ವಿತರಿಸುತ್ತೀರಿ. ಆದರೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ.

ವಿವಿಧ ಸಂಘಟನೆ ಮುಖಂಡರು,

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಆಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಗೈರಾಗಿದ್ದ ಹಿನ್ನೆಲೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿ ಹೊರ ನಡೆದ ಘಟನೆ ನಡೆದಿದೆ.

ಉಪವಿಭಾಗಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸ್ಥಳೀಯ ರೈತ ಸಂಘ, ಕರವೇ ಸಂಘಟನೆ, ದಲಿತ ಸಂಘಟನೆಯ ಮುಖಂಡರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಲ್ಲದೆ ಸಭೆಯನ್ನು ನಡೆಸಬಾರದು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ದಸರಾ ಪೂರ್ವಭಾವಿ ಸಭೆ ಕರೆಯುತ್ತಿದ್ದು, ಸಾರ್ವಜನಿಕರಿಂದ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಸಭೆಯಲ್ಲಿ ಪಡೆದು ಯಾವುದನ್ನೂ ಕಾರ್ಯಗತಕ್ಕೆ ತರುತ್ತಿಲ್ಲ. ಜೊತೆಗೆ ಇಂದಿನ ಸಭೆಗೆ ಸ್ಥಳೀಯ ಶಾಸಕರೇ ಗೈರಾಗುವುದರಿಂದ ಈ ಸಭೆಗೆ ಯಾವ ಬೆಲೆ ಇದೆ ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಕಲಾವಿದರ ಕಡೆಗಣನೆ:

ಶ್ರೀರಂಗಪಟ್ಟಣ ದಸರಾ ಸಮಿತಿಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವಿಭಾಗಗಳಿಗೂ ಅಧಿಕಾರಿ ವರ್ಗಗಳ ಮೂಲಕ ಸಮಿತಿ ರಚಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿ ಸೇರಿ ಇತರೆ ಸಂಘಟನೆಗಳ ಮುಖಂಡರನ್ನು ಕಡೆಗಣಿಸಿದೆ. ಜೊತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿ ವರ್ಷವೂ ಅವಕಾಶವಿಲ್ಲ. ಕಳೆದ ಬಾರಿ ಕಾರ್ಯಕ್ರಮ ನಡೆಸಿರುವ ಹಲವು ಕಲಾವಿದ ತಂಡಗಳಿಗೆ ಯಾವ ಗೌರವ ಧನ ನೀಡಿಲ್ಲ. ನಿತ್ಯ ಕಚೇರಿಗೆ ಅಲೆಯುವಂತೆ ಮಾಡಿದ್ದೀರಿ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದರು.

ಪ್ರತಿ ಬಾರಿ ದೊಡ್ಡ ಮನರಂಜನೆ ಹೆಸರಿನಲ್ಲಿ ದೊಡ್ಡ ದೊಡ್ಡ ಚಿತ್ರ ನಟರನ್ನು ಸಂಗೀತ, ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಹೆಚ್ಚಿನ ಹಣವನ್ನು ಸ್ಥಳದಲ್ಲೇ ವಿತರಿಸುತ್ತೀರಿ. ಆದರೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಕೂಡಲೇ ಈ ಸಭೆಯನ್ನು ಮುಂದೂಡಬೇಕು ಎಂದು ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಪಟ್ಟು ಹಿಡಿದು ಸಭೆಯಿಂದ ಹೊರ ನಡೆದರು. ನಂತರ ಉಪವಿಭಾಗಾದಿಕಾರಿ ಶ್ರೀನಿವಾಸ್ ಸಭೆಯನ್ನು ಮರು ಮಾತನಾಡದೆ ಮುಂದೂಡಿದರು. ಸಭೆಗೆ ಕೆಲ ಪುರಸಭೆ ಸದಸ್ಯರು, ಸಾರ್ವಜನಿಕರು, ಅಧಿಕಾರಿ ವರ್ಗ ಬೆರಳೆಣಿಕೆಯಲ್ಲಿದುದ್ದು ಕಾಣುತ್ತಿತ್ತು.

ಸಭೆಯಲ್ಲಿ ತಹಸೀಲ್ದಾರ್ ಚೇತನಾ ಯಾದವ್, ತಾಪಂ ಇಒ ವೇಣು, ಡಿವೈಎಸ್‌ಪಿ ಶಾಂತ ಮಲ್ಲಪ್ಪ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಸದಸ್ಯರಾದ ಕೃಷ್ಣಪ್ಪ, ನರಸಿಂಹೇಗೌಡ, ದಯಾನಂದ, ಕೆ.ಬಿ. ಬಸವರಾಜು, ಮುಖ್ಯಾಧಿಕಾರಿ ಸತೀಶ್, ಸಿಪಿಐ ಬಿ.ಜಿ.ಕುಮಾರ್ ಉಪಸ್ಥಿತರಿದ್ದು, ರೈತ ಸಂಘದ ನಾಗೇಂದ್ರಸ್ವಾಮಿ, ಕಿರಂಗೂರುಪಾಪು, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕಸಾಪ ಅಧ್ಯಕ್ಷ ಸಿದ್ದಲಿಂಗು, ಮಾಜಿ ಅಧ್ಯಕ್ಷ ಪುರುಷೋತ್ತಮ ಚಿಕ್ಕಪಾಳ್ಯ, ಸಿ. ಸ್ವಾಮಿಗೌಡ, ಕಸಾಪ ನಗರಾಧ್ಯಕ್ಷ ಎಂ.ಸುರೇಶ್, ದಲಿತ ಸಂಘಟನೆಯ ಹೊನ್ನಯ್ಯ, ಕುಮಾರ್ ಸೇರಿದಂತೆ ಇತರೆ ಅಧಿಕಾರಿ ವರ್ಗ ಹಾಗೂ ಇತರೆ ಸಾರ್ವಜನಿಕರು ಇದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ