ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಶಾಸಕರ ಚಾಲನೆ

KannadaprabhaNewsNetwork |  
Published : Jan 12, 2024, 01:45 AM IST
11ಕೆಎಂಎನ್ ಡಿ18,19 | Kannada Prabha

ಸಾರಾಂಶ

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಜಾನುವಾರುಗಳ ಪಾತ್ರ ಗಣನೀಯವಾಗಿದೆ. ರೈತರು ಕೃಷಿ ಜೊತೆಗೆ ಮನರಂಜನೆಗೂ ಜಾನುವಾರುಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆಗಳಿಗೆ ಉತ್ತೇಜನ ನೀಡಬೇಕು. ದಿನ ಕಳೆದಂತೆ ಕೃಷಿ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕದ ಕಾರಣ ಆತ ಕೃಷಿಯಿಂದ ವಿಮುಖನಾಗುವ ಪರಿಸ್ಥಿತಿ ಎದುರಾಗುತ್ತಿದೆ

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಜೋಡಿ ಹಸುಗಳ ಹಾಗೂ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಶಾಸಕ ದಿನೇಶ್ ಗೂಳಿಗೌಡ ಹಾಗೂ ಶಾಸಕ ಕೆ.ಎಂ.ಉದಯ್ ಗುರುವಾರ ಚಾಲನೆ ನೀಡಿದರು.

ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಸಮೀಪದ ಮೈದಾನದಲ್ಲಿ ಮಾರಸಿಂಗನಹಳ್ಳಿ ಬಾಯ್ಸ್ ತಂಡ ಏರ್ಪಡಿಸಿದ್ದ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ಹಿಂದೆ ಗ್ರಾಮೀಣ ಭಾಗದ ಜನರು ಶುಭ ಸಮಾರಂಭಗಳಿಗೆ ತೆರಳಲು ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು. ರೈತರು ಜಾನುವಾರುಗಳೊಂದಿಗೆ ಅಭಿನಭಾವ ಸಂಬಂಧ ಹೊಂದಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಜಾನುವಾರುಗಳ ಪಾತ್ರ ಗಣನೀಯವಾಗಿದೆ. ರೈತರು ಕೃಷಿ ಜೊತೆಗೆ ಮನರಂಜನೆಗೂ ಜಾನುವಾರುಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆಗಳಿಗೆ ಉತ್ತೇಜನ ನೀಡಬೇಕು. ದಿನ ಕಳೆದಂತೆ ಕೃಷಿ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕದ ಕಾರಣ ಆತ ಕೃಷಿಯಿಂದ ವಿಮುಖನಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಕೃಷಿ ಜೊತೆಗೆ ಕುಟುಂಬದ ನಿರ್ವಹಣೆಗಾಗಿ ಹೈನುಗಾರಿಕೆ ಅಥವಾ ರೇಷ್ಮೆ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಇದರಿಂದ ಅಲ್ಪಮಟ್ಟಿನ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಲಗೋರಿ, ಮರಕೋತಿಯಾಟದ ಜೊತೆಗೆ ಎತ್ತಿನ ಗಾಡಿ ಓಟದ ಸ್ಪರ್ಧೆ ಮನರಂಜನೆಗೆ ಅನುಕೂಲವಾಗಿದೆ. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಸ್ಪರ್ಧಾ ಸಮಯದಲ್ಲಿ ಗ್ರಾಮಸ್ಥರು ಯಾವುದೇ ಗೊಂದಲಗಳಿಗೆ ಅವಕಾಶ ನೀಡಿದಂತೆ ಶಾಂತ ರೀತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ಮಂಡ್ಯ ಸೇರಿದಂತೆ ನೆರೆ ಜಿಲ್ಲೆಗಳಿಂದ ಆಗಮಿಸಿದ್ದ 21 ಜೋಡಿ ರಾಸುಗಳು ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಸಾವಿರಾರು ಜನರು ಸ್ಪರ್ಧೆಯನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಗೀತಾ ಸತೀಶ, ಉಪಾಧ್ಯಕ್ಷ ಗೂಳಿಶ, ಸದಸ್ಯರಾದ ನಾಗರಾಜು, ಸಾಕಮ್ಮ, ಪುರುಷೋತ್ತಮ್, ಮಾಜಿ ಸದಸ್ಯೆ ವರಲಕ್ಷ್ಮೀ, ಪಿಡಿಒ ರವಿಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮಾರಸಿಗನಹಳ್ಳಿ ರಾಮಚಂದ್ರ, ಮಾರಸಿಂಗನಹಳ್ಳಿ ಬಾಯ್ಸ್ ತಂಡದ ಕಿರಣ್ ಗೂಳಿ, ಮುತ್ತುರಾಜ, ರಮೇಶ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ