ಶಾಸಕರ ವಿದೇಶ ಪ್ರವಾಸ ಖಾಸಗಿಯಾದ್ದು: ಸುಧಾಕರ್

KannadaprabhaNewsNetwork |  
Published : Feb 21, 2026, 01:15 AM IST
      ಸಿಕೆಬಿ-2 ನಗರ ಹೊರವಲಯದ ಅಗಲಗುರ್ಕಿ ರಾ.ಹೆ.44ರ ಬಳಿ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ನಡೆಯಲಿರುವ ಪ್ರತಿಭಟನಾ ಸ್ಥಳವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ರವರು  ಶಾಸಕ ಪ್ರದೀಪ್ ಈಶ್ವರ್ ರೊಂದಿಗೆ ಪರಿಶೀಲಿಸಿದರು | Kannada Prabha

ಸಾರಾಂಶ

ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಹೈನುಗಾರಿಕೆ ಮತ್ತು ಹೈನು ಉದ್ಯಮ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್ ಪಕ್ಷದ ಕೆಲ ಶಾಸಕರ ವಿದೇಶ ಪ್ರವಾಸವು ಖಾಸಗಿ ಪ್ರವಾಸವಾಗಿದ್ದು, ಅದರಲ್ಲಿ ರಾಜಕೀಯವನ್ನು ಎಳೆದು ತರುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.ನಗರ ಹೊರವಲಯದ ಅಗಲಗುರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರ ಬಳಿ ಮಂಗಳವಾರ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ಫೆ. 23ರಂದು ನಡೆಯುವ ಬೃಹತ್ ಹೋರಾಟದ ವೇದಿಕೆ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ವಿದೇಶ ಪ್ರವಾಸ ಕುರಿತು ತಾವು ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಹೈನುಗಾರಿಕೆ ಮತ್ತು ಹೈನು ಉದ್ಯಮ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು. ಈ ಪ್ರವಾಸವನ್ನು ಅವರು ತಮ್ಮ ಸ್ವಂತ ಖರ್ಚಿನಿಂದ ಕೈಗೊಂಡಿದ್ದು, ಇದಕ್ಕೂ ರಾಜ್ಯ ರಾಜಕೀಯಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಹೈಕಮಾಂಡ್ ಸಮಗ್ರವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧರಾಗಿರುತ್ತೇವೆ. ಈ ವಿಷಯದಲ್ಲಿ ಅನಾವಶ್ಯಕ ಗದ್ದಲ ಸೃಷ್ಟಿಸುವುದು ಬೇಡ ಎಂದರು.

ವಿಬಿ ಜಿ ರಾಮ್‌ ಜಿ ಕಾಯ್ದೆ ಕುರಿತು ಮಾತನಾಡಿ, ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾ ಜಾರಿಯ್ದೆಗೊಳಿಸಿದ ಕೇಂದ್ರ ಸರ್ಕಾರದ ಕುತಂತ್ರವನ್ನು ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಡಿ ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು.

ಆದರೆ ಈ ಅಧಿಕಾರವು ಈಗ ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಅವರ ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ. ರಾಜ್ಯದ ರೈತರೆಲ್ಲರೂ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ ಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಬೇಕು ಎಂಬು ಮನವಿ ಮಾಡಿದರು.

ಮನರೇಗಾ ಅಡಿಯಲ್ಲಿ ಕಾರ್ಮಿಕರ ವೇತನ ಪೂರ್ತಿಯಾಗಿ ಕೇಂದ್ರವೇ ನೀಡುತ್ತಿತ್ತು. ಆದರೆ ಈಗ ಕೇಂದ್ರ ಕೇವಲ ಶೇ. 60 ರಷ್ಟು ಅನುದಾನ ನೀಡುತ್ತಿದ್ದು, ಶೇ.40ರಷ್ಟನ್ನು ರಾಜ್ಯ ಭರಿಸಬೇಕಾಗಿದೆ. ಹಿಂದೆ 100 ದಿನ ಕೆಲಸದ ದಿನಗಳನ್ನು ಖಾತ್ರಿಪಡಿಸುತ್ತಿತ್ತು. ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೇ, ಮನರೇಗಾವನ್ನು ರದ್ದುಪಡಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಲ್ಲಿನ ಮಹಾತ್ಮಾಗಾಂಧಿ ಹೆಸರನ್ನು ತೆಗೆಯಲಾಗಿದೆ ಎಂದರು.

ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ತಂತ್ರ ರೂಪಿಸುತ್ತಿದೆ. ಪ್ರಧಾನಿ ಅಮೇರಿಕಾದ ಮುಂದೆ ಮಂಡಿಯೂರುತ್ತಿರುವುದು ಸರಿಯಲ್ಲ. ಕೇವಲ ಎರಡು–ಮೂರು ಉದ್ಯಮಿಗಳ ಕೈಗೆ ದೇಶದ ಪ್ರಮುಖ ಸಂಸ್ಥೆಗಳು ಒಪ್ಪಿಸಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಉದಯ್ ಕುಮಾರ್, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ನಾಮ ನಿರ್ದೇಶಿತ ಸದಸ್ಯ ಕಾಕಲಚಿಂತೆ ರಾಜಣ್ಣ, ಮಾಜಿ ಜಿಪಂ. ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ನಂದಿ ರಮೇಶ್, ಮುರಳಿ, ಎಸ್.ಪಿ. ಶ್ರೀನಿವಾಸ್, ಷಾಹೀದ್, ಮತ್ತಿತರರು ಇದ್ದರು. ಸಿಕೆಬಿ-2 ನಗರ ಹೊರವಲಯದ ಅಗಲಗುರ್ಕಿ ರಾ.ಹೆ.44ರ ಬಳಿ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ನಡೆಯಲಿರುವ ಪ್ರತಿಭಟನಾ ಸ್ಥಳವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ ಅವರೊಂದಿಗೆ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಸಫಾರಿ ಪುನಾರಂಭ: ಸಚಿವ ಖಂಡ್ರೆ
ವಿಬಿ ಜಿ ರಾಮ್ ಜಿ ಯೋಜನೆ ರದ್ದುಗೊಳಿಸಲು ಆಗ್ರಹ