ಶಾಸಕರೇ, ನಗರದ ಜನತೆಗೆ ಮೊದಲು ಕುಡಿಯುವ ನೀರು ನೀಡಿ : ಸದಸ್ಯರ ಒತ್ತಾಯ

KannadaprabhaNewsNetwork | Published : May 22, 2025 1:03 AM
ಗಾಂಧಿನಗರದ ರೈಲ್ವೆ ಅಂಡರ್ ಪಾಸ್ ಸೇತುವೆ ಮೇಲ್ಭಾಗದಲ್ಲಿ ಒಂದು ಬದಿ ಸೇಫ್ಟಿ ಫೆನ್ಸಿಂಗ್ ಹಾಕಿದ್ದು, ಶಾಲೆ ಇರುವ ಭಾಗದಲ್ಲಿ ಫೆನ್ಸಿಂಗ್ ಹಾಕದ ಕಾರಣ ಮಕ್ಕಳಿಗೆ ತೀವ್ರ ಅಪಾಯವಿದ್ದು, ಕೂಡಲೆ ಸೇಫ್ಟಿ ಫೆನ್ಸಿಂಗ್ ಹಾಕುವಂತೆ ಒತ್ತಾಯಿಸಿದರು.
Follow Us

ಕನ್ನಡಪ್ರಭ ವಾರ್ತೆ ತಿಪಟೂರು

ನಗರಸಭೆಯಲ್ಲಿ ಬುಧವಾರ ಅಧ್ಯಕ್ಷೆ ಯಮುನಾರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಹಣಕಾಸು ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವ ವಿಚಾರಕ್ಕಿಂತ, ನಗರದಲ್ಲಿ ಉದ್ಭವವಾಗಿರುವ ಕುಡಿಯುವ ನೀರಿನ ಸಮಸ್ಯೆ, ಚರಂಡಿ, ಬೀದಿ ದೀಪಗಳ ನಿರ್ವಹಣೆಯ ಕೊರತೆ ಬಗ್ಗೆಯೇ ಶಾಸಕರು, ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ತೀವ್ರ ಚರ್ಚೆ, ಗಲಾಟೆಯೇ ಜೋರಾಗಿತ್ತು.

ಸಾಮಾನ್ಯ ಸಭೆಯಲ್ಲಿ ಬಹುತೇಕ ಬಿಜೆಪಿ ಸದಸ್ಯರು ಗೈರಾಗಿದ್ದರು. ಆಡಳಿತ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರು ಮತ್ತು ಶಾಸಕರ ನಡುವೆ ಕುಡಿಯುವ ನೀರಿನ ಬಗ್ಗೆ ಚರ್ಚೆ ಜೋರಾಗಿಯೇ ನಡೆಯಿತು. ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಹೇಮಾವತಿ ನೀರಿಲ್ಲದ ಕಾರಣ ನಗರದ ಜನತೆ ನೀರಿಗಾಗಿ ಪರದಾಡುವಂತಾಗಿದೆ. ನಮ್ಮ ವಾರ್ಡ್‌ಗಳಿಗೆ ಮೊದಲು ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಬೇರೆ ಅನುದಾನಗಳ ಬಗ್ಗೆ ಮಾತನಾಡೋಣ ಎಂದು ಆಡಳಿತ ಪಕ್ಷದ ಸದಸ್ಯರೇ ಶಾಸಕರು ಸೇರಿದಂತೆ ನಗರಸಭೆ ಅಧ್ಯಕ್ಷರ ಮೇಲೆ ಒತ್ತಡ ಹಾಕಿದರು.

ಇದಕ್ಕೆ ಉತ್ತರಿಸಿದ ಶಾಸಕ ಕೆ. ಷಡಕ್ಷರಿ, ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನನ್ನ ಜವಾಬ್ದಾರಿ. ಕುಡಿಯುವ ನೀರಿಗೆ ನಾನು ಯಾವತ್ತೂ ಪಕ್ಷಬೇಧ ಮಾಡಿಲ್ಲ. ಯಾವ ವಾರ್ಡ್‌ಗೆ ನೀರಿನ ಅವಶ್ಯಕತೆ ಇದೆಯೋ ಅಲ್ಲಿಗೆ ನೀರು ಕಲ್ಪಿಸುತ್ತೇನೆ. ಹೇಮಾವತಿ ನೀರಿಲ್ಲದ ಕಾರಣ ತೊಂದರೆಯಾಗಿದೆ. ಆರು ತಿಂಗಳೊಳಗೆ ನಗರಕ್ಕೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುತ್ತೇನೆ. ಇದಕ್ಕೆ ಸಮಯಾವಕಾಶ ಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.

ನಗರಸಭೆ ಸದಸ್ಯ ಸೊಪ್ಪು ಗಣೇಶ್ ಮಾತನಾಡಿ, ನಗರದ ಕೆಲ ವಾರ್ಡ್‌ಗಳಲ್ಲಿ ಬೀದಿದೀಪ, ಎಲ್‌ಇಡಿ, ಹೈಮಾಸ್ಟ್ ದೀಪಗಳು ಕೆಟ್ಟು ತಿಂಗಳುಗಳೇ ಕಳೆದಿವೆ. ಕಳೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದರೂ ಪೌರಾಯುಕ್ತರು ಕ್ರಮವಹಿಸಿಲ್ಲ. ವಿದ್ಯುತ್ ದೀಪಗಳಿಲ್ಲದ ಕತ್ತಲೆಯಲ್ಲಿ ನಿವಾಸಿಗಳು ಕಾಲಕಳೆಯುವಂತಾಗಿದ್ದು, ನಮಗೆ ಈಗಲೇ ಉತ್ತರ ನೀಡಿ ಎಂದರು.

ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಉತ್ತರಿಸಿ, ನಾವು ಈಗಾಗಲೇ ಡಿಎಂಎ ಬೋರ್ಡ್‌ನವರಿಗೆ ನಗರಕ್ಕೆ ಅವಶ್ಯಕವಾದ ಬೀದಿ ದೀಪಗಳ ವ್ಯವಸ್ಥೆ ಬಗ್ಗೆ ಅನುಮೋದನೆ ನೀಡಿದ್ದೇವೆ. ಸರ್ವೇ ಕಾರ್ಯವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಬೀದಿದೀಪಗಳ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ಅಳವಡಿಸಲಾಗುವುದು ಎಂದರು.

ಸದಸ್ಯರಾದ ಮಹಮ್ಮದ್ ಗೌಸ್, ನಹೀಂಪಾಷ ಮಾತನಾಡಿ, ಗಾಂಧಿನಗರದ ಭಾಗಗಳಲ್ಲಿ ಕುಡಿಯುವ ನೀರಿಲ್ಲ. ಬೋರ್‌ವೆಲ್‌ಗಳು ಕೆಟ್ಟು ನಿಂತಿವೆ, ಗುಣಮಟ್ಟದ ಮೋಟಾರ್, ಪಂಪ್, ಕೇಬಲ್‌ಗಳನ್ನು ಅಳವಡಿಸುವಂತೆ ಒತ್ತಾಯಿಸಿದರು. ನಂತರ ಗಾಂಧಿನಗರದ ರೈಲ್ವೆ ಅಂಡರ್ ಪಾಸ್ ಸೇತುವೆ ಮೇಲ್ಭಾಗದಲ್ಲಿ ಒಂದು ಬದಿ ಸೇಫ್ಟಿ ಫೆನ್ಸಿಂಗ್ ಹಾಕಿದ್ದು, ಶಾಲೆ ಇರುವ ಭಾಗದಲ್ಲಿ ಫೆನ್ಸಿಂಗ್ ಹಾಕದ ಕಾರಣ ಮಕ್ಕಳಿಗೆ ತೀವ್ರ ಅಪಾಯವಿದ್ದು, ಕೂಡಲೆ ಸೇಫ್ಟಿ ಫೆನ್ಸಿಂಗ್ ಹಾಕುವಂತೆ ಒತ್ತಾಯಿಸಿದರು.

ಸಭೆಯಲ್ಲಿ ನಗರಸಭೆಯಿಂದ 2025- 26ನೇ ಸಾಲಿಗೆ 2.55 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಶೇ. 40ರಷ್ಟು (1 ಕೋಟಿ 2 ಲಕ್ಷ ರು,) ಸಾಮಾನ್ಯ ನಿಧಿ, ಶೇ. 60ರಷ್ಟು (1 ಕೋಟಿ 53 ಲಕ್ಷ ರು.) ಮತ್ತು ನಿರ್ಬಂಧಿತ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಯಿತು. 2024- 25ನೇ ಸಾಲಿನ 15ನೇ ಹಣಕಾಸು ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಕೈಗೊಂಡಿದ್ದು ಉಳಿಕೆಯಾಗಿರುವ ಮೊತ್ತಕ್ಕೆ ಬದಲಿ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಸಭೆಯಲ್ಲಿ ಮಂಡಿಸಲಾಯಿತು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘಾ ಶ್ರೀಭೂಷಣ್, ಸದಸ್ಯರಾದ ಮಹೇಶ್, ಗಂಗಾ, ಭಾರತಿ, ಆಶೀಫಾ ಬಾನು, ಓಹಿಲಾ, ವಿನುತಾ, ಟಿ.ಎನ್.ಪ್ರಕಾಶ್, ಎಂ.ಎಸ್.ಯೋಗೇಶ್, ಲೋಕ್‌ನಾಥ್‌ಸಿಂಗ್, ಹೂರ್‌ಬಾನು, ಇಂಜಿನಿಯರ್ ರಂಗಸ್ವಾಮಿ, ಆರೋಗ್ಯ ಇಲಾಖೆ ಎಇಇ ರಾಘವೇಂದ್ರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.