ರೈತರ ಸಾಗುವಳಿ ಜಮೀನು ಪರಿಶೀಲಿಸಿದ ಶಾಸಕರು

KannadaprabhaNewsNetwork |  
Published : Apr 14, 2026, 01:15 AM IST
13ಕೆಆರ್ ಎಂಎನ್ 10.ಜೆಪಿಜಿಶಾಸಕ ಇಕ್ಬಾಲ್ ಹುಸೇನ್ ರವರು ರೈತರ ಸಾಗುವಳಿ ಜಮೀನು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಬೆಳ್ಳಂಬೆಳಗ್ಗೆ ರೈತರ ಸಾಗುವಳಿ ಜಮೀನಿಗಿಳಿದು ಸ್ಥಳ ಪರಿಶೀಲನೆ ನಡೆಸಿದರು

ರಾಮನಗರ: ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಬೆಳ್ಳಂಬೆಳಗ್ಗೆ ರೈತರ ಸಾಗುವಳಿ ಜಮೀನಿಗಿಳಿದು ಸ್ಥಳ ಪರಿಶೀಲನೆ ನಡೆಸಿದರು.

ಕಂದಾಯ ಇಲಾಖೆ ಹಾಗೂ ಸರ್ವೆ ಅಧಿಕಾರಿಗಳೊಂದಿಗೆ ಶಾಸಕ ಇಕ್ಬಾಲ್ ಹುಸೇನ್ ಸಾಗುವಳಿ ಅರ್ಜಿಗಳನ್ನು ಹಿಡಿದುಕೊಂಡು ಬೆಳಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಉರಿ ಬಿಸಿಲನ್ನು ಲೆಕ್ಕಿಸದೆ ಕಸಬಾ-1 ಮತ್ತು ಕಸಬಾ -2 ರಲ್ಲಿನ 58 ರೈತರ ಸಾಗುವಳಿ ಜಮೀನುಗಳ ಸ್ಥಳ ಪರಿಶೀಲಿಸಿ, ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದರು.

ಸಾಗುವಳಿ ಚೀಟಿಗಾಗಿ ಕಣ್ಣೀರಿಟ್ಟ ವೃದ್ಧೆ:

ಕೆಂಪನಹಳ್ಳಿಯಲ್ಲಿ ಸಾಗುವಳಿ ಭೂಮಿ ಪರಿಶೀಲನೆ ವೇಳೆ ವೃದ್ಧೆಯೊಬ್ಬರು ಕಣ್ಣೀರಿಡುತ್ತಾ ನಮ್ಮ ಕುಟುಂಬ ಈ ತುಂಡು ಭೂಮಿನ ನಂಬ್ಕೊಂಡು ಜೀವನ ಸಾಗಿಸ್ತಿದೀವಿ. ಈ ಭೂಮಿ ಇಲ್ಲದಿದ್ರೆ ನಮಗೆ ಬದುಕೇ ಇಲ್ಲ. ನಮ್ಗೆ ಮೋಸ ಮಾಡ್ಬೇಡಿ, ಸಾಗುವಳಿ ಚೀಟಿ ಕೊಡಿ ಕೊಡಿ ಸ್ವಾಮಿ ಎಂದು ಕೈ ಮುಗಿದು ಮನವಿ ಮಾಡಿದರು. ಆಗ ಶಾಸಕರು ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಇದೇ ರೀತಿ ಅರಳಿಮರದೊಡ್ಡಿ, ಕೇತೋಹಳ್ಳಿ, ಕೆಂಜಿಗರಹಳ್ಳಿ, ಮಾಯಗಾನಹಳ್ಳಿ, ಧಾರಾಪುರ, ಸುಗ್ಗನಹಳ್ಳಿ, ಬೊಮ್ಮಚ್ಚನಹಳ್ಳಿ, ಚಿಕ್ಕಸೂಲಿಕೆರೆ ಗ್ರಾಮಗಳಲ್ಲಿಯೂ ರೈತರು ಶಾಸಕ ಇಕ್ಬಾಲ್ ಹುಸೇನ್ ಅವರಲ್ಲಿ ಅಹವಾಲು ಹೇಳಿಕೊಂಡರು.

ಸಾಗುವಳಿ ಜಮೀನುಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್ , ರೈತರು ತುಂಡು ಭೂಮಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿಗಳು ಬಾಕಿ ಉಳಿದಿವೆ. ಸಿ.ಎಂ.ಲಿಂಗಪ್ಪ ಅವರು ಶಾಸಕರಾಗಿದ್ದ ಸಮಯದಲ್ಲಿ ಹಲವು ರೈತರಿಗೆ ಸಾಗುವಳಿ ಚೀಟಿ ನೀಡಿದ್ದು ಬಿಟ್ಟರೆ, ಆನಂತರ ಆಯ್ಕೆಯಾದ ಶಾಸಕರು ರೈತರ ಅರ್ಜಿಗಳನ್ನು ವಿಲೇವಾರಿ ಮಾಡಲು ಕಾಳಜಿಯೇ ವಹಿಸಿಲ್ಲ ಎಂದು ಕಿಡಿಕಾರಿದರು.

ಆಗಿನ ಕಾಲಾವಧಿಯಲ್ಲಿ ರೈತರಿಗೆ ಸಾಗುವಳಿ ಚೀಟಿ ನೀಡಲು ಸುಲಭವಾದ ಅವಕಾಶಗಳು ಕಾನೂನಿನಲ್ಲಿತ್ತು. ಚೀಟಿ ವಿತರಿಸಲು ಸಾಕಷ್ಟು ಅವಕಾಶ ಇತ್ತು. ಆದರೀಗ ಕಾನೂನುಗಳು ಕಠಿಣವಾಗಿವೆ. ಕಾನೂನು ಸರಳವಾಗಿದ್ದ ಸಮಯದಲ್ಲಿ ರೈತರಿಗೆ ಸಾಗುವಳಿ ಚೀಟಿ ಕೊಡಲು ಈ ಹಿಂದೆ ಆಯ್ಕೆಯಾದವರು ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

‍ವರ್ಷದೊಳಗೆ ಎಲ್ಲ ಅರ್ಜಿಗಳು ವಿಲೇವಾರಿ:

ನಾನು ರೈತನ ಮಗನಾಗಿ ಅವರ ಋಣ ತೀರಿಸಲು ಮುಂದಾಗಿದ್ದೇನೆ. ಕಸಬಾ 1 ಹಾಗೂ ಕಸಬಾ -2 ವೃತ್ತಗಳಲ್ಲಿ ಸುಮಾರು 58 ರೈತರ ನಮೂನೆ 50 ಮತ್ತು ನಮೂನೆ 53ರ ಅರ್ಜಿಗಳು ಬಾಕಿ ಉಳಿದಿವೆ. ಇನ್ನೂ ನಮೂನೆ - 57ರ ಅರ್ಜಿಗಳನ್ನು ಕೈಗೆತ್ತಿಕೊಂಡಿಲ್ಲ. ಹಾರೋಹಳ್ಳಿ , ಮರಳವಾಡಿ ಹಾಗೂ ಕೈಲಾಂಚ ಭಾಗದಲ್ಲಿಯೂ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಈ ವರ್ಷದೊಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ ಶಾಶ್ವತ ಪರಿಹಾರ ದೊರಕಿಸಿಕೊಡುತ್ತೇವೆ ಎಂದು ತಿಳಿಸಿದರು.

ರೈತರ ಸಮ್ಮುಖದಲ್ಲಿ ನಾನೇ ಸಾಗುವಳಿ ಅರ್ಜಿಗಳನ್ನು ಹಿಡಿದುಕೊಂಡು ಸ್ಥಳ ಪರಿಶೀಲನೆ ಮಾಡುತಿದ್ದೇನೆ. ಕೆಲವರ ಅರ್ಜಿಗಳು ಲಾಗಿನ್, ಅಪ್‌ಲೋಡ್ ಆಗಬೇಕಿದೆ, ಕೆಲವು ಅರ್ಜಿದಾರರು ಮರಣ ಹೊಂದಿದ್ದು ಅವುಗಳನ್ನು ಅವರ ಅವಲಂಬಿತರ ಹೆಸರಿಗೆ ಸಾಗುವಳಿ ಮಂಜೂರು ಮಾಡಬೇಕಿದೆ. ಕೆಲವು ಸರ್ವೆ ನಂಬರ್ ಗಳು ದುರಸ್ಥಿ ಆಗಬೇಕಿದೆ. ಆಗಾಗಿ ರೈತರಿಗೆ ಮತ್ತೆ ಯಾವುದೇ ತೊಂದರೆ ಆಗದಂತೆ ಡಾಕುಮೆಂಟೇಷನ್ ಮಾಡಲು ತಹಸೀಲ್ದಾರ್ ಮತ್ತು ಸರ್ವೆಯರ್ ಜೊತೆ ಚರ್ಚಿಸಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಈ ವೇಳೆ ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರಾದ ರವಿ, ತಿಮ್ಮಯ್ಯ, ಅಮೃತ, ಕೆಡಿಪಿ ಸದಸ್ಯ ಮುಕುಂದ, ತಹಸೀಲ್ದಾರ್ ತೇಜಸ್ವಿನಿ, ರಾಜಸ್ವ ನಿರೀಕ್ಷಕ ನಾಗರಾಜು, ವಿಎ ಚೇತನ್, ಗ್ರಾಮ ಸಹಾಯಕ ರಂಗಸ್ವಾಮಿ, ನಟರಾಜು, ಮುಖಂಡರಾದ ಸಿ.ರಾಮಯ್ಯ, ಲೋಕೇಶ್, ರಂಜಿತ್, ಕೆಂಪನಹಳ್ಳಿಸೀನಪ್ಪ, ಮಂಜು, ಮಾಯಗಾನಹಳ್ಳಿ ರೇವಣ್ಣ, ವಸಂತ, ವಿನೋದ್ ಮತ್ತಿತರರು ಹಾಜರಿದ್ದರು.

ಕೋಟ್ .............

ನಮೂನೆ 50 ಮತ್ತು 53ರಲ್ಲಿ ರೈತರು ಅರ್ಜಿ ಸಲ್ಲಿಸಿರುವ ಸ್ಥಳಕ್ಕೆ ಬಂದು ನೋಡಿದರೆ ರೈತರು ಮಾವು ನೆಟ್ಟಿದ್ದಾರೆ. ರಾಗಿ, ತೊಗರಿ ಬೆಳೆದು ಜೀವನ ನಡೆಸುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಈ ಹಿಂದೆ ಶಾಸಕರಾಗಿದ್ದವರು ಕಾನೂನು ಸರಳವಾಗಿದ್ದ ಸಮಯದಲ್ಲಿ ಹಲವು ರೈತರಿಗೆ ನೆರವು ನೀಡಬಹುದಿತ್ತು. ಅವರು ಏಕೆ ಸಮ್ಮನಾದರೂ ಎಂದು ತಿಳಿಯುತ್ತಿಲ್ಲ. ಈಗ ಕಠಿಣವಾದ ಕಾನೂನು ನಡುವೆಯೂ ನಾನು ರೈತರಿಗೆ ನೆರವಾಗುತ್ತಿದ್ದೇನೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

ಕೋಟ್ ............

ಹಿಂದಿನ ಶಾಸಕರು ರೈತರ ಮನೆಗೆ ಹೋಗಿ ಕಷ್ಟ ಸುಖ ಕೇಳಿದ್ದರೆ ಇಷ್ಟು ವರ್ಷಗಳಿಂದ ರೈತರ ಸಾಗುವಳಿ ಚೀಟಿ ಅರ್ಜಿಗಳು ಧೂಳು ಹಿಡಿಯುತ್ತಿರಲಿಲ್ಲ. ರೈತನಾಗಿ ಕೃಷಿಕರ ಕಷ್ಟ ಸುಖ ಅರಿತಿರುವ ಶಾಸಕ ಇಕ್ಬಾಲ್ ಹುಸೇನ್ ಖುದ್ಧಾಗಿ ಸಾಗುವಳಿ ಭೂಮಿಯನ್ನು ವೀಕ್ಷಿಸುತ್ತಿದ್ದಾರೆ. ತ್ವರಿತಗತಿಯಲ್ಲಿ ಸಾಗುವಳಿ ಚೀಟಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

-ರವಿ, ಸದಸ್ಯರು, ಲ್ಯಾಂಡ್ ಗ್ರ್ಯಾಂಟ್ ಕಮಿಟಿ, ರಾಮನಗರ

13ಕೆಆರ್ ಎಂಎನ್ 10.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್ ರೈತರ ಸಾಗುವಳಿ ಜಮೀನು ವೀಕ್ಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು