ಕ್ಯಾಬಿನೆಟ್‌ ಮುನ್ನ ಶಾಸಕರ ಸಭೆ ಆಗ್ಲಿ: ಬಸವರಾಜ ಶಿವಗಂಗಾ

KannadaprabhaNewsNetwork | Published : Apr 15, 2025 12:57 AM

ಸಾರಾಂಶ

MLAs' meeting before cabinet meeting: Basavaraj Sivaganga

-10ವರ್ಷ ಹಿಂದಿನ ಇಡೀ ಜಾತಿ ಜನಗಣತಿಯ ವರದಿಯೇ ಗೊಂದಲದ ಗೂಡು

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವ ರೀತಿ ಜಾತಿ ಜನಗಣತಿ ಮಾಡಿದ್ದಾರೆಂದೇ ಗೊತ್ತಿಲ್ಲ. ಮೊದಲು ಇಂತಹ ಜಾತಿ ಜನಗಣತಿಯನ್ನು ಲಿಂಗಾಯತ ಶಾಸಕರು ವಿರೋಧಿಸಬೇಕು, ಕ್ಯಾಬಿನೆಟ್‌ಗೂ ಮುನ್ನ ಎಲ್ಲಾ ವೀರಶೈವ ಲಿಂಗಾಯತ ಶಾಸಕರ ಸಭೆ ಕರೆದು ಚರ್ಚೆ ಆಗಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಬಸವರಾಜ ಜಾತಿ ಜನಗಣತಿ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್‌ನಲ್ಲಿ ಜಾತಿ ಗಣತಿ ವಿಚಾರವಾಗಿ ಚರ್ಚೆ ಮಾಡುತ್ತೇವೆಂದಿದ್ದಾರೆ. ವೀರಶೈವ ಲಿಂಗಾಯತ ಶಾಸಕರು ಮೊದಲು ಇಂತಹ ಜಾತಿ ಜನಗಣತಿ ವರದಿಯನ್ನು ವಿರೋಧಿಸಬೇಕು. ಕ್ಯಾಬಿನೆಟ್‌ಗೂ ಮುನ್ನ ಎಲ್ಲಾ ವೀರಶೈವ ಲಿಂಗಾಯತ ಶಾಸಕರ ಸಭೆ ಕರೆದು, ಚರ್ಚೆಯಾಗಬೇಕು ಎಂದರು.

ಜಾತಿ ಜನಗಣತಿಯಲ್ಲಿ ಸಾದರ ಲಿಂಗಾಯತರನ್ನು ಕೇವಲ 69 ಸಾವಿರ ಜನಸಂಖ್ಯೆ ಮಾತ್ರ ತೋರಿಸಿದ್ದಾರೆ. ನನ್ನ ಚನ್ನಗಿರಿ ಕ್ಷೇತ್ರವೊಂದರಲ್ಲೇ 60 ಸಾವಿರಕ್ಕೂ ಅಧಿಕ ಸಾದರ ಲಿಂಗಾಯತರು ಇದ್ದಾರೆ. ಆದರೆ, ಜಾತಿ ಜನಗಣತಿ ಹೆಸರಿನಲ್ಲಿ ಇಡೀ ವೀರಶೈವ ಲಿಂಗಾಯತರ ಜನಸಂಖ್ಯೆಯನ್ನೇ ಕಡಿಮೆ ತೋರಿಸಲಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

ಇನ್ನು ಕುರುಬ ಸಮುದಾಯದ ಜನಸಂಖ್ಯೆಯೂ ಹೆಚ್ಚಾಗಿದ್ದರೂ ಆ ಸಮುದಾಯದ ಜನಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ. ಜಾತಿ ಜನಗಣತಿ ವರದಿಯೇ ಸರಿಯಾಗಿಲ್ಲ. ಎಲ್ಲಾ ಜಾತಿಗಳಲ್ಲೂ ಒಳ ಪಂಗಡಗಳಿವೆ. ಆದರೆ, ಬೇರೆ ಸಮುದಾಯಗಳಲ್ಲಿ ಒಳ ಪಂಗಡಗಳನ್ನು ತೋರಿಸಿಲ್ಲ. ವೀರಶೈವ ಲಿಂಗಾಯತರಲ್ಲೇ ಒಳ ಜಾತಿಗಳನ್ನು ತೋರಿಸಿದ್ದಾರೆ. ನಮ್ಮ ಮನೆಗೂ ಜಾತಿ ಗಣತಿ ಮಾಡುವುದಕ್ಕೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

-----

ಜಾತಿಗಣತಿ ವರದಿಯನ್ನು ಸಚಿವರಿಗೆ ಮಾತ್ರವೇ ನೀಡಿದ್ದಾರೆ. ಇಡೀ ಜಾತಿ ಗಣತಿಯೇ ಸಾಕಷ್ಟು ಗೊಂದಲದ ಗೂಡಾಗಿದೆ. ಇಂತಹ ವರದಿಯನ್ನು ನಾವು ವಿರೋಧಿಸುತ್ತೇವೆ. ಯಾವ ಲೆಕ್ಕಾಚಾರದಲ್ಲಿ ಜಾತಿ ಗಣತಿ ಮಾಡಿದ್ದಾರೆಂಬುದೇ ಗೊತ್ತಾಗುತ್ತಿಲ್ಲ. ಜಾತಿ ಗಣತಿ ಬಗ್ಗೆ ಚರ್ಚೆ ಮಾಡಿದರೆ ನಾವೂ ಸಹ ಅದೇ ಚರ್ಚೆ ಮಾಡುತ್ತೇವೆ. ನಮ್ಮ ಕ್ಷೇತ್ರಗಳಲ್ಲಿ ಜನರಿಗೆ ನಾವು ಉತ್ತರ ಕೊಡುವುದಕ್ಕೂ ಆಗುತ್ತಿಲ್ಲ. ನಮ್ಮ ಸಮಾಜದ ಜನರು, ಗುರುಗಳ ಪ್ರಶ್ನೆಯನ್ನು ನಾವು ಕೇಳುತ್ತೇವೆ ಎಂದು ಅವರು ತಿಳಿಸಿದರು.

ಏಳು ಜನ ವೀರಶೈವ ಲಿಂಗಾಯತ ಸಚಿವರು ಹಾಗೂ ಸಮಾಜದ ಶಾಸಕರ ಜೊತೆಗೆ ಚರ್ಚೆ ಮಾಡಬೇಕು. ಹತ್ತು ವರ್ಷದ ಹಿಂದೆ ಮಾಡಿರುವ ಜಾತಿ ಜನಗಣತಿ ಇದಾಗಿದೆ. ಒಂದೇ ಸಲ ಜಾತಿ ಜನಗಣತಿ ಬಿಡುಗಡೆ ಮಾಡಿದರೆ ನಾವು ಉತ್ತರ ಕೊಡುವುದು ಕಷ್ಟವಿದೆ. ಯಾವ ಆಧಾರದಲ್ಲಿ ಜಾತಿ ಗಣತಿ ಮಾಡಿದ್ದಾರೆಂಬುದೇ ಪ್ರಶ್ನೆ. ಕೆಟಗರಿ ಆಸೆಗಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಬೇರೆ ಬೇರೆ ರೀತಿ ಬರೆಸಿದ್ದಾರೆ. 1.25 ಕೋಟಿಗೂ ಅಧಿಕ ವೀರಶೈವ ಲಿಂಗಾಯತರಿದ್ದೇವೆ. ಮೊದಲು ಜಾತಿ ಜನಗಣತಿ ಬಗ್ಗೆ ಸ್ಪಷ್ಟನೆ ನೀಡಿ, ಬಿಡುಗಡೆ ಮಾಡಲಿ ಎಂದು ಅವರು ತಾಕೀತು ಮಾಡಿದರು.

ಮುಸ್ಲಿಂ ಸಮುದಾಯದಲ್ಲೇ ನಾಲ್ಕೈದು ಪಂಗಡವಿದೆ. ಎಲ್ಲಾ ಮುಸ್ಲಿಂ ಎಂಬುದಾಗಿ ಬರೆಸಿದ್ದಾರೆ. ಯಾವುದೇ ಜಾತಿ ಓಲೈಕೆ ಮಾಡುವುದು ಇದರಲ್ಲಿ ಏನೂ ಇಲ್ಲ. ಯಾವ ಜಾತಿ ಎಷ್ಟು ಜನ ಇದೆಯೆಂಬುದು ಪಾರದರ್ಶಕವಾಗಿ ನೀಡಬೇಕು. ಚರ್ಚೆ ಇಲ್ಲದೇ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವ ಮೊದಲೇ ಚರ್ಚೆ ಮಾಡಬೇಕು. ಬಿಡುಗಡೆಗೆ ಮುನ್ನ ಚರ್ಚಿಸುವುದು ಒಳ್ಳೆಯದು. ಬಿಡುಗಡೆ ಮಾಡಿ, ನಂತರ ತಿದ್ದುಪಡಿ ಮಾಡಿದರೆ ಸರ್ಕಾರಕ್ಕೂ ಮುಜುಗರ ತರುವ ಸಂಗತಿ ಎಂದು ಬಸವರಾಜ ವಿ.ಶಿವಗಂಗಾ ತಿಳಿಸಿದರು.

...........................

..ಬಾಕ್ಸ್..

ಶಾಮನೂರು ಹೇಳಿಕೆ ಸರಿ, ಅವರ ಬೆನ್ನಿಗೆ ನಿಲ್ತೇವೆ

ರಾಜ್ಯದಲ್ಲಿ ಜಾತಿ ಜನಗಣತಿಯೇ ವರದಿಯೇ ಸರಿಯಾಗಿಲ್ಲ. ಮಠ ಮಾನ್ಯಗಳು, ಮಠಾಧೀಶರು, ಸ್ವಾಮೀಜಿಗಳು ನಮ್ಮನ್ನು ಕೇಳುತ್ತಿದ್ದಾರೆ. ನಾವು ಆ ಎಲ್ಲರ ಪ್ರಶ್ನೆಗಳಿಗೆ ಏನು ಉತ್ತರ ಹೇಳಬೇಕು? ಅಭಾವೀ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಸಮಾಜದ ಹಿರಿಯರೂ ಆದ ಡಾ.ಶಾಮನೂರು ಶಿವಶಂಕರಪ್ಪನವರು ಹೇಳಿರುವುದು ಸರಿಯಾಗಿದೆ. ನಾವು ಹಿರಿಯ ಶಾಸಕ ರೂ ಆದ ಶಾಮನೂರು ಶಿವಶಂಕರಪ್ಪನವರ ಬೆನ್ನಿಗೆ ನಿಲ್ಲುತ್ತೇವೆ.

-ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ

---

-ವರದಿ ಸಚಿವರ ಕೈಯಲ್ಲಿದ್ದು, ಸಮಾಜ-ಗುರುಗಳಿಗೆ ನಾವು ಏನು ಹೇಳಬೇಕು?

-ಜಾತಿ ಜನಗಣತಿಯಲ್ಲಿ ಲಿಂಗಾಯತ, ಕುರುಬರನ್ನೆಲ್ಲಾ ಕಡಿಮೆ ತೋರಿಸಿದ್ದಾರೆ,

Share this article