ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಮತದಾನ?
-ಆಗ್ನೇಯ ಪದವೀಧರರ ಕ್ಷೇತ್ರ ಶೇ.73.58
-ಪಶ್ಚಿಮ ಪದವೀಧರರ ಕ್ಷೇತ್ರ ಶೇ.75.62-ಈಶಾನ್ಯ ಶಿಕ್ಷಕರರ ಕ್ಷೇತ್ರ ಶೇ.86.97
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.81.98, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಶೇ.73.58, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಶೇ.75.62 ಹಾಗೂ ಈಶಾನ್ಯ ಶಿಕ್ಷಕರರ ಕ್ಷೇತ್ರದಲ್ಲಿ ಶೇ.86.97ರಷ್ಟು ಮತದಾನವಾಗಿದೆ.
ಬೆಳಗ್ಗೆ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಮಧ್ಯಾಹ್ನ 12 ಗಂಟೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿದರು. ಕೆಲ ಮತಗಟ್ಟೆಗಳ ಬಳಿ ಸಂಜೆ 4 ಗಂಟೆ ನಂತರವೂ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತದಾನದ ಸಮಯವನ್ನು ವಿಸ್ತರಿಸಿ, ಮತ ಚಲಾಯಿಸಲು ಅವಕಾಶ ಕಲ್ಪಿಸಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳ ನಾಯಕರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸುಮಾರು ಒಂದು ತಿಂಗಳ ಕಾಲ ಭರ್ಜರಿ ಪ್ರಚಾರ ಮಾಡಿದ್ದರು. ಆಡಳಿತರೂಢ ಕಾಂಗ್ರೆಸ್ ಪಕ್ಷವು ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಮೈತ್ರಿಕೂಟವನ್ನು ಹೇಗೆ ಎದುರಿಸಿದೆ ಎಂಬುದು ಫಲಿತಾಂಶ ಬಳಿಕ ಗೊತ್ತಾಗಲಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೆ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ಅ.27ರಂದು ಮತ ಎಣಿಕೆ ನಡೆಯಲಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಾಕ್ಸ್....
4 ಸ್ಥಾನಗಳಿಗೆ ಒಟ್ಟು43 ಅಭ್ಯರ್ಥಿ ಫೈಟ್
ನಾಲ್ಕು ಕ್ಷೇತ್ರಗಳ ಪೈಕಿ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ 6 ಅಭ್ಯರ್ಥಿಗಳು ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 10 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಇವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.