ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪೋಷಕರು ಪಣ ತೊಡಬೇಕು: ನಯನಾ ಮೋಟಮ್ಮ

KannadaprabhaNewsNetwork |  
Published : Oct 24, 2026, 01:45 AM IST
ಮೂಡಿಗೆರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಮೂಡಿಗೆರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಐಎಎಸ್, ಕೆಎಎಸ್ ಅಧಿಕಾರಿಗಳು, ವೈದ್ಯರು ಹಾಗೂ ಉದ್ಯಮಿಗಳನ್ನಾಗಿ ರೂಪಿಸಲು ಪೋಷಕರು ಇಂದಿನಿಂದಲೇ ಪಣ ತೊಡಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ; ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಐಎಎಸ್, ಕೆಎಎಸ್ ಅಧಿಕಾರಿಗಳು, ವೈದ್ಯರು ಹಾಗೂ ಉದ್ಯಮಿಗಳನ್ನಾಗಿ ರೂಪಿಸಲು ಪೋಷಕರು ಇಂದಿನಿಂದಲೇ ಪಣ ತೊಡಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಗಂಗನಮಕ್ಕಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದವರು ಇನ್ನಷ್ಟು ಸಂಘಟಿತರಾಗಿ ಮುಂದಿನ 50 ವರ್ಷಗಳಲ್ಲಿ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಿ. ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಯಾಗಬಾರದು ಎಂಬ ಉದ್ದೇಶದಿಂದ ಶಾಸಕಿಯಾಗಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇನೆ. ಟೀಕೆಗಳನ್ನು ಸ್ವೀಕರಿಸಿ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಮೂಡಿಗೆರೆಯನ್ನು ಮಾದರಿ ಕ್ಷೇತ್ರವಾಗಿಸಲು ಶ್ರಮಿಸುತ್ತಿದ್ದೇನೆ ಎಂದರು.ಸಮಾಜದ ಪ್ರತಿ ಕುಟುಂಬ ಶಿಕ್ಷಣಕ್ಕೆ ಆದ್ಯತೆ ನೀಡಿ, ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಉನ್ನತ ಹುದ್ದೆ ಗಳಿಸಲು ಪೋಷಕರು ಪ್ರೋತ್ಸಾಹಿಸಬೇಕು. ಮೊಬೈಲ್ ಬಳಕೆಯತ್ತ ಮಕ್ಕಳು ಹೆಚ್ಚು ಆಕರ್ಷಿತ ರಾಗುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ, ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರು ಅರಿಯಬೇಕು ಎಂದು ಸಲಹೆ ನೀಡಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಸಮಾಜ ಸಂಘಟಿಸುವ ಮೂಲಕ ಉನ್ನತ ಮಟ್ಟದಲ್ಲಿ ಬೆಳೆದು ನಿಂತ ಸಮುದಾಯದ ಸಾಧನೆ ಶ್ಲಾಘನೀಯ. ಬಂಗಾರಪ್ಪ, ಜನಾರ್ದನ ಪೂಜಾರಿ, ಜಾನಪ್ಪ ಹಾಗೂ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಗಣ್ಯರು ಸಮಾಜದ ಹೆಮ್ಮೆ ನಾಯಕರು. ಸಮಾಜದ ಅನೇಕರು ಉನ್ನತ ಹುದ್ದೆ ಅಲಂಕರಿಸಿರುವುದು ಸಂತಸದ ಸಂಗತಿ. ಇದೇ ರೀತಿಯಲ್ಲಿ ಪ್ರತಿಯೊಂದು ಕುಟುಂಬವೂ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು. ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು.ಎಂ.ಕೆ. ಪ್ರಾಣೇಶ್ ಮಾತನಾಡಿ ಸಂಘ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಚಾರ. ಸಂಘದ ಬೆಳವಣಿಗೆಯಲ್ಲಿ ಹಿರಿಯರು ಪಟ್ಟ ಶ್ರಮ ಸ್ಮರಿಸಬೇಕು. ಮುಂದಿನ ದಿನಗಳಲ್ಲಿ ಸಮಾಜ ವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಮನೋಜ್ ಕುಮಾರ್ ವಹಿಸಿದ್ದರು.ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀ ಕ್ಷೇತ್ರ ಕುಡುಪಿನ ಗೋಕರಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್, ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾರ್,ರಕ್ಷಾ ಫೌಂಡೇಶನ್ ಸಂಸ್ಥಾಪಕಿ ವಿಭಾ ಸುಷ್ಮಾ, ಸುರೇಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ, ದಯಾನಂದ್, ಯೋಗೇಶ್ ಪೂಜಾರಿ, ಸದಾನಂದ ಪೂಜಾರಿ, ಎಚ್.ಎಂ. ಸತೀಶ್, ದೀಪಕ್ ದೊಡ್ಡಯ್ಯ, ಪೃಥ್ವಿ ಸಾಗರ್, ಕೇಶವ ಸುವರ್ಣ, ಎಂ.ಜಿ. ನಾಗರತ್ನ, ಗಂಗಮ್ಮ, ಗಣೇಶ್ ಪೂಜಾರಿ, ಲಕ್ಷ್ಮಣ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಫೋಟೊ ಶೀರ್ಷಿಕೆ 1:

ಮೂಡಿಗೆರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು.ಫೋಟೊ ಶೀರ್ಷಿಕೆ 2: ಮಹೋತ್ಸವದ ಅಂಗವಾಗಿ ಮೂಡಿಗೆರೆ ಪಟ್ಟಣದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾನ ಕೇಂದ್ರಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ
ವೀರವನಿತೆ ಚೆನ್ನಮ್ಮ ಆದರ್ಶ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ