ಎಂಡಿಎ ಹಗರಣಕ್ಕೆ ಸಚಿವ ಬೈರತಿ ಸುರೇಶ್ ನೇರ ಕಾರಣ

KannadaprabhaNewsNetwork |  
Published : Jul 31, 2024, 01:02 AM IST
6 | Kannada Prabha

ಸಾರಾಂಶ

ಎಂಡಿಎ ಹಗರಣಕ್ಕೆ ಕಾರಣರಾದ ಸಚಿವ ಬೈರತಿ ಸುರೇಶ್, ಆಯುಕ್ತರಾಗಿದ್ದ ನಟೇಶ್, ದಿನೇಶ್ ಕುಮಾರ ಅವರನ್ನು ಜೈಲಿಗೆ ಕಳುಹಿಸಿ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) 5 ಸಾವಿರ ಕೋಟಿ ಹಗರಣವಾಗಿದೆ. ಇದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೇರ ಕಾರಣ. ಮೊದಲು ಅವನನ್ನು ಒದ್ದು ಒಳಗೆ ಹಾಕಿ ಎಂದು ವಿಧಾ‌ನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ರೀತಿ ಬೈರತಿ ಸುರೇಶ್‌ ನನ್ನು ನೀವು ಜೈಲಿಗೆ ಕಳುಹಿಸಿ. ಎಂಡಿಎ ಹಗರಣಕ್ಕೆ ಕಾರಣರಾದ ಸಚಿವ ಬೈರತಿ ಸುರೇಶ್, ಆಯುಕ್ತರಾಗಿದ್ದ ನಟೇಶ್, ದಿನೇಶ್ ಕುಮಾರ ಅವರನ್ನು ಜೈಲಿಗೆ ಕಳುಹಿಸಿ ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಏಕೆ ಬೈರತಿ ಸುರೇಶ್ ಜೈಲಿಗೆ ಕಳುಹಿಸಿಲ್ಲ? ನಿಮ್ಮ ಸಮುದಾಯದವನು ಅಂತಾನಾ ಯಾವ ನ್ಯಾಯ ಸಿದ್ದರಾಮಯ್ಯ?ನಿವೇಶನಗಳನ್ನು ಸರಂಡರ್ ಮಾಡಿ ಸಿಬಿಐಗೆ ವಹಿಸಿ. ನಿಮ್ಮ ಯೋಗ್ಯತೆಗೆ ಎರಡು ಬಾರಿ ಸಿಎಂ ಆಗಿ, ಒಬ್ಬರಿಗೆ ನಿವೇಶನ ಕೊಡಲು ಆಗಲಿಲ್ಲ. ಕಷ್ಟಕ್ಕೆ ಅಹಿಂದ ಬೇಕು ಸುಖಕ್ಕೆ ಹಿಂದ್. ಗೌರವಯುತವಾಗಿ ಮರ್ಯಾದೆಯಿಂದ ಎಲ್ಲವನ್ನೂ ಸರಂಡರ್ ಮಾಡಿ. ಇಲ್ಲ ಆ ಜಾಗದಲ್ಲಿ ಮಕ್ಕಳಿಗೆ ಶಾಲೆ ಕಟ್ಟಿ ಎಂದರು.

ಸಿದ್ದರಾಮಯ್ಯರಿಂದ ಇಡೀ ಸಮಾಜದ ಮರ್ಯಾದೆ ಹೋಗಿದೆ. ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ನೇರ ಹೊಣೆ. ನೀವೇ ಹಣಕಾಸು ಮಂತ್ರಿಯಾಗಿದ್ದೀರಾ. ವಾಲ್ಮೀಕಿ ನಿಗಮದ ಹಣ ತೆಲಂಗಾಣ, ಆಂಧ್ರದ ಬಾರ್ ಅಂಡ್ ರೆಸ್ಟೋರೆಂಟ್‌ ಗೆ ಹೋಗಿದೆ. 40 ವರ್ಷ ಗೌರವಯುತವಾಗಿ ರಾಜಕಾರಣ ಮಾಡಿದ್ದೀರಾ. ಆದರೆ, ಕೊನೆಯಲ್ಲಿ ಏಕೆ ಈ ರೀತಿ ಆಗುತ್ತಿದೆ. ಮೈಸೂರು ಗೌರವವನ್ನು ಕಳೆಯಬೇಕು ಅಂತಿದ್ದೀರಾ. ಸಿದ್ದರಾಮಯ್ಯ ಮೇಲೆ ಯಾರಿಗೂ ಹೊಟ್ಟೆ‌ಕಿಚ್ಚು ಇಲ್ಲ.

ಮೊದಲು ನಿಮ್ಮನ್ನು ನೀವು ಸರಿಪಡಿಸಿಕೊಳ್ಳಿ ಎಂದು ಅವರು ಆಗ್ರಹಿಸಿದರು.

ನಾಯಿ ನರಿಗಳೆಲ್ಲಾ ಮುಖ್ಯಮಂತ್ರಿ ಕಚೇರಿ ಸೇರಿಕೊಂಡುಬಿಟ್ಟಿವೆ. ನಟೇಶ, ದಿನೇಶ ಅವರ ಕೆಲಸ ಈಗಲೂ ಬೈರತಿ ಸುರೇಶ್ ಆ್ಯಂ ಟಿ ಚೇಂಬರ್‌ ನಲ್ಲಿ ನಡೆಯುತ್ತಿದೆ. ನಾಯಕ ಸಮಾಜಕ್ಕೆ ಅವಮಾನ ಆದರೆ ಓಕೆ ನಿಮ್ಮ‌ ಸಮಾಜಕ್ಕೆ ಅವಮಾನ ಆಗಬಾರದಾ?. ಸ್ವಜನ ಪಕ್ಷಪಾತ ಸಿಎಂ ಅವರಿಗೆ ಸರಿಯಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಎಂ ಏಕಾಂಗಿಯಾಗಿದ್ದಾರೆ‌, ಹೆದರಿದ್ದಾರೆ, ಬೆದರಿದ್ದಾರೆ

ಎಂಡಿಎ ಹಗರಣದಲ್ಲಿ ನಾವ್ಯಾರು 50:50 ನಿವೇಶನ ಪಡೆದಿಲ್ಲ. ನಾನು ಕಾನೂನುಬದ್ಧವಾಗಿ ನಿವೇಶನ ಪಡೆದಿದ್ದೇನೆ. ರಾಜ್ಯ ಸರ್ಕಾರ ಎಂಡಿಎ ಮತ್ತು ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ‌, ಹೆದರಿದ್ದಾರೆ, ಬೆದರಿದ್ದಾರೆ. ಸಿಎಂ ಏನೇನೋ ಮಾತನಾಡುತ್ತಿದ್ದಾರೆ‌. ದೇವೇಗೌಡರ ಕುಟುಂಬ, ಯಡಿಯೂರಪ್ಪ ಕುಟುಂಬ ನಿವೇಶನ ಪಡೆದಿಲ್ಲವೇ ಎಂದೆಲ್ಲಾ ಹೇಳುತ್ತಿದ್ದಾರೆ. ನಾವು ಹೇಳುತ್ತಿರುವುದು 50:50 ವಿಚಾರ ಸಿದ್ದರಾಮಯ್ಯ ಎಂದು ಅವರು ವಾಗ್ದಾಳಿ ನಡೆಸಿದರು.

ಎಂಡಿಎ ಎಕ್ಕುಟ್ಟು ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ‌. ಇದನ್ನು ಸರಿಪಡಿಸುವ ಬದಲು ನೀವು ಮಾಡಿಲ್ವಾ, ಅವರು ಮಾಡಿಲ್ವಾ ಎಂದು ಹೇಳುತ್ತಿದ್ದಾರೆ. ಆಡಳಿತದಲ್ಲಿ ಇರುವ ಸರ್ಕಾರ ಭಂಡತನ ಮಾಡಬಾರದು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಕುಟುಕಿದರು.

ಕೇವಲ ಜೆಡಿಎಸ್, ಬಿಜೆಪಿ ನಾಯಕರ ಹೆಸರು ಹೇಳುತ್ತಿರುವ ಸಿಎಂ, ಕಾಂಗ್ರೆಸ್ ನವರ ಹೆಸರು ಏಕೆ ಹೇಳುತ್ತಿಲ್ಲ. ಕಾಂಗ್ರೆಸ್ ನ ಹಿನಕಲ್ ಪಾಪಣ್ಣನ ಹೆಸರು ಹೇಳಿ ಸಿದ್ದರಾಮಯ್ಯನವರೇ. ಸಿದ್ದರಾಮಯ್ಯ ತಮ್ಮ ಹೆಂಡತಿ ಹೆಸರಿನಲ್ಲಿ ಸೈಟು ಪಡೆದಿರುವುದು ನಾಚಿಕೆಗೇಡು ಎಂದು ಅವರು ಕಿಡಿಕಾರಿದರು.

ನಗರಾಭಿವೃದ್ಧಿ ಸಚಿವನನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದರು‌. ಆ ಸಚಿವ ಕಂತ್ರಿ ರೀತಿ ವರ್ತಿಸುತ್ತಿದ್ದಾನೆ. ಸಿದ್ದರಾಮಯ್ಯ ಶ್ವೇತವಸ್ತ್ರ ಧರಿಸುತ್ತಿದ್ದಾರೆ. ಆ ಶ್ವೇತ ವಸ್ತ್ರದ ಮೇಲೆ‌ಕಪ್ಪು ಚುಕ್ಕೆ ಬಿದ್ದಿದೆ. ಸಿದ್ದರಾಮಯ್ಯ ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ಅವರ ಜೊತೆಯಲ್ಲಿರುವವರೇ ಕಪ್ಪು ಮಸಿ ಬಳಿದು ಹೋಗುತ್ತಾರೆ. ಸಿದ್ದರಾಮಯ್ಯನವರೇ ನೀವೀಗ ರಾಜಕೀಯದ ಸಂಧ್ಯಾ ಕಾಲದಲ್ಲಿದ್ದೀರಿ. ನಿಮ್ಮ ತಪ್ಪಿನಿಂದ ಏನೂ ಅರಿಯದ ನಿಮ್ಮ ಪತ್ನಿ ಪಾರ್ವತಿಯವರ ಹೆಸರಿಗೆ ಕಳಂಕ ಬರುವಂತಾಗಿದೆ‌ ಎಂದರು.

ವಾಲ್ಮೀಕಿ ನಿಗಮ‌ಹಗರಣದಲ್ಲಿ ಸಚಿವ ನಾಗೇಂದ್ರ ತಲೆದಂಡವಾಯಿತು. ಇದಕ್ಕೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಕೂಡ ಹೊಣೆಗಾರರು. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರಲಿಲ್ಲ ಎಂದು ಅವರು ಆರೋಪಿಸಿದರು.

ಎಂಡಿಎಯಲ್ಲಿ ಅಕ್ರಮ‌ ಮುಂದುವರಿದಿದೆ

ಎಂಡಿಎಯಲ್ಲಿ 50:50 ಅನುಪಾತದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದ ಸಮಗ್ರ ತನಿಖೆಯಾಗಬೇಕಿದೆ. ಎಂಡಿಎಯಲ್ಲಿ ಈಗಲೂ ಅಕ್ರಮ‌ ಮುಂದುವರಿದಿದೆ. ಎಂಡಿಎ ಆಯುಕ್ತರಾಗಿದ್ದ ದಿನೇಶ್ ಕುಮಾರ್ ವರ್ಗಾವಣೆ ಆದ ಬಳಿಕವೂ ಅಕ್ರಮ ಮುಂದುವರಿದಿದೆ‌. ದಿನೇಶ್ ಕುಮಾರ್ ವಿಧಾನಸೌದದಲ್ಲಿ ಕುಳಿತು ಈಗಲೂ ಅಕ್ರಮ ನಡೆಸುತ್ತಿದ್ದಾರೆ. ಅವರನ್ನು ಜೈಲಿಗೆ ಹಾಕಿದ್ದರೇ ಈ ರೀತಿ ಆಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.

----

ಕೋಟ್....

ತಪ್ಪಿತಸ್ಥರಿಗೆ ಸರ್ಕಾರದ ಕೃಪಾಕಟಾಕ್ಷ ಇದೆ. ಇದೇ ಕಾರಣದಿಂದ ತಪ್ಪಿತಸ್ಥರು ಈಗಲೂ ಅಕ್ರಮ ಮುಂದುವರಿಸಿದ್ದಾರೆ. ನಾನು ಮತ್ತು ಶಾಸಕ ಶ್ರೀವತ್ಸ ಹೊರತುಪಡಿಸಿದರೇ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಮುಡಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಎಂಡಿಎ ಹಗರಣದ ವಿರುದ್ಧ ಬಿಜೆಪಿ. ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ.

- ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!