ಆರೋಗ್ಯ ಇಲಾಖೆ ನೌಕರರು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ

KannadaprabhaNewsNetwork |  
Published : Apr 03, 2025, 12:36 AM IST
10 | Kannada Prabha

ಸಾರಾಂಶ

ಆಯುಷ್ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳನ್ನು ಕೂಡಾ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಮಾಡುವ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಮೈಸೂರುಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.ನಗರದ ಜಿ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ (ಎನ್‌ಐಎಂಎ) ದ ಕರ್ನಾಟಕ ರಾಜ್ಯ ಶಾಖೆ ಹಾಗೂ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಆಯುರ್ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಆಯುಷ್ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳನ್ನು ಕೂಡಾ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಮಾಡುವ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಆರೋಗ್ಯ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಮಾಡಲು ಕಳೆದ ವರ್ಷವೇ ಮುಂದಾಗಿದ್ದೆವು. ಕಾರಣಾಂತರಗಳಿಂದ ಆಗಿರಲಿಲ್ಲ. ಈ ವರ್ಷ ಜಾರಿಗೆ ತರಬೇಕು ಎಂದುಕೊಂಡಿದ್ದೇವೆ. ಏಕೆಂದರೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಎಲ್ಲರಿಗೂ ನ್ಯಾಯ ಸಿಗುತ್ತದೆ ಎನ್ನುವುದು ನಮ್ಮ ಸರ್ಕಾರದ ನಿಲುವು ಎಂದರು.ಇಲ್ಲಿ ಯಾರೂ ಯಾರ ಮೇಲೂ ಪ್ರಭಾವ ಬೀರುವುದು, ಶಿಫಾರಸ್ಸು ಮಾಡುವುದು ಸೇರಿದಂತೆ ಇನ್ನಿತರ ದಾರಿಗಳಲ್ಲಿ ವರ್ಗಾವಣೆ ಆಗುವುದು ತಪ್ಪುತ್ತದೆ. ಆದ್ದರಿಂದ ಇದೇ ಮಾದರಿಯನ್ನು ಆಯುಷ್ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ಸೇವೆ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ 20 ಹಾಸಿಗೆ, ತಾಲೂಕು ಆಸ್ಪತ್ರೆಯಲ್ಲಿ 5 ಹಾಸಿಗೆಗಳನ್ನು ಆಯುಷ್‌ ಗೆ ಮೀಸಲಾಗಿ ಇಡಲಾಗುವುದು. ಇಲ್ಲಿ ರೋಗಿಗಳಿಗೆ ಸೇವೆ ನೀಡಲಾಗುವುದು. ಪಂಚಕರ್ಮ ಸೇರಿದಂತೆ ಮತ್ತಿತರ ಸೇವೆಗಳು ದೊರಕುತ್ತವೆ. ಅದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ಆಯುಷ್ ವೈದ್ಯರನ್ನು ನಿಯೋಜಿಸಲಾಗುತ್ತದೆ ಎಂದರು.ಆಯುಷ್ ವೈದ್ಯರು ನಮ್ಮ ಪದ್ಧತಿಯ ಔಷಧಿಯನ್ನು ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ ಎನ್ನುವ ಆರೋಪವು ಅಲೋಪಥಿ ವೈದ್ಯರು ಮಾಡುತ್ತಾರೆ. ಜ್ವರ, ನೆಗಡಿ, ಕೆಮ್ಮಿನಂತಹ ಸಣ್ಣ ಪ್ರಮಾಣದ ಕಾಯಿಲೆಗೆ ಮಾತ್ರ ನಾವು ಇಂತಹ ಔಷಧಿಯನ್ನು ಶಿಫಾರಸ್ಸು ಮಾಡುತ್ತೇವೆ. ಇದರಿಂದ ಜನರಿಗೆ ಅಪಾಯವಿಲ್ಲ ಎನ್ನುವುದು ಆಯುಷ್‌ ನ ವಾದವಾಗಿದೆ. ಕಾನೂನಿನ ಪ್ರಕಾರ ಬೇರೆ ವೈದ್ಯ ಪದ್ಧತಿಯ ಔಷಧವನ್ನು ಮತ್ತೊಂದು ಪದ್ಧತಿಯವರು ಶಿಫಾರಸ್ಸು ಮಾಡಬಾರದು. ಆದರೆ ಇವರು ರೋಗಿಗಳನ್ನು ಕಾಪಾಡಲು ಈ ರೀತಿ ಮಾಡುತ್ತೇವೆ ಎನ್ನುತ್ತಾರೆ. ಆದ್ದರಿಂದ ಇಂತಹ ವಿಚಾರಗಳನ್ನು ಸೂಕ್ಷ್ಮ ವಾಗಿ ನೋಡಬೇಕಾಗಿದೆ ಎಂದರು. ವಾರದಲ್ಲಿ ಸಭೆಅಲೋಪಥಿ ಹಾಗೂ ಆಯುಷ್ ನಡುವೆ ಇರುವ ಗೊಂದಲ ಹಾಗೂ ಸಮಸ್ಯೆ ಪರಿಹಾರ ಮಾಡುವ ಮೂಲಕ ಸಮಗ್ರ ಮತ್ತು ಸಂಯೋಜಿತವಾಗಿ ಕಾರ್ಯನಿರ್ವಹಣೆಗೆ ಅನುಕೂಲವಾಗುವ ದೃಷ್ಟಿಯಿಂದ ಮುಂದಿನ ವಾರ ಸಭೆ ಕರೆಯಲಾಗುತ್ತದೆ. ಇಲ್ಲಿ ಆಯುಷ್‌ ನವರಿಗೆ ಯಾವ ಸಮಸ್ಯೆ ಇವೆ. ಯಾವ ಬೇಡಿಕೆಗಳು ಇವೆ ಎನ್ನುವುದನ್ನು ಅರಿತುಕೊಳ್ಳಲಾಗುತ್ತದೆ. ಈ ಸಭೆಗೆ ಜಿಲ್ಲಾ ಆಯುಷ್ ಅಧಿಕಾರಿ ಮತ್ತು ಎರಡು- ಮೂರು ವೈದ್ಯರು ಹಾಜರಾಗಿ ತಮ್ಮ ಅನಿಸಿಕೆ ತಿಳಿಸಬಹುದು. ಈ ಸಭೆಯ ಬಳಿಕ ಒಂದು ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.ಅಲೋಪಥಿ ಪದ್ಧತಿ ಕಾಯಿಲೆ ಬಂದ ನಂತರ ಚಿಕಿತ್ಸೆ ನೀಡುವ ಪದ್ಧತಿಯಾಗಿದೆ. ಆಯುಷ್ ಪದ್ಧತಿಯು ನಮ್ಮ ದೇಶದ ಪಾರಂಪರಿಕಾ ಪದ್ಧತಿ. ಕಾಯಿಲೆ ಬರುವ ಮೊದಲೇ ಯಾವ ರೀತಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿಕೊಡುತ್ತದೆ. ಆದ್ದರಿಂದ ಈ ಎರಡು ಪದ್ಧತಿಯನ್ನು ಒಂದೇ ವ್ಯವಸ್ಥೆಯಡಿ ತರುವುದಕ್ಕೆ ಸ್ಪಷ್ಟವಾದ ದಾರಿ ಹುಡುಕಬೇಕು. ಅಲ್ಲದೆ ಆಯುಷ್ ಪದ್ಧತಿಯಲ್ಲಿ ಸೇವೆಯನ್ನು ನೀಡುತ್ತಿರುವವರೂ ಕೂಡಾ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ನಿಯಮದ ಗೆರೆ ದಾಟಿ ಹೋಗಬಾರದು ಎಂದರು.ಇತ್ತೀಚೆಗೆ ಸಣ್ಣ ವಯಸ್ಸಿಗೆ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಆಗಿರುವುದು. ಆದ್ದರಿಂದ ನಮ್ಮ ದೈನಂದಿನ ಬದುಕಿನಲ್ಲಿ ಕೆಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುವ ಮೂಲಕ ಕಾಯಿಲೆ ಬಾರದಂತೆ ತಡೆಗಟ್ಟಬೇಕು. ಮನುಷ್ಯನಿಗೆ ಆಯಸ್ಸು ಎಷ್ಟಿದ್ದರೇ ಏನು, ಆರೋಗ್ಯವಿಲ್ಲದ ಮೇಲೆ ಯಾವುದೇ ಪ್ರಯೋಜನವಿಲ್ಲ. ಆರೋಗ್ಯವಿದ್ದರೆ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು ಎಂದರು.ಎನ್‌ಐಎಂಎ ರಾಜ್ಯ ಅಧ್ಯಕ್ಷ ಡಾ. ಸಿದ್ದಪ್ಪ ಮಾಗರಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಅಧ್ಯಕ್ಷ ಡಾ. ಜಗದೀಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಡಾ. ಲಕ್ಷ್ಮೀ ನಾರಾಯಣ ಶೆಣೈ, ಡಾ.ಎ.ಎಸ್. ಚಂದ್ರಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ