ಉತ್ತರದ ಜಿಲ್ಲೆಗಳಲ್ಲಿನ್ನು ಮೊಬೈಲ್ ರಕ್ತ ಸಂಗ್ರಹ ವಾಹನ ಸವಾರಿ!

KannadaprabhaNewsNetwork |  
Published : Jun 01, 2026, 02:00 AM IST
ಹುಬ್ಬಳ್ಳಿ ಕೆಎಂಸಿಆರ್‌ಐನ ಮೊಬೈಲ್‌ ರಕ್ತ ಸಂಗ್ರಹ ವಾಹನ. | Kannada Prabha

ಸಾರಾಂಶ

ಕೆಎಂಸಿಆರ್‌ಐ ವೈದ್ಯಕೀಯ ಮಂಡಳಿಯವರು ಎಲ್ಲ ವ್ಯವಸ್ಥೆಯುಳ್ಳ ವಾಹನಬೇಕೆಂಬ ಕೋರಿಕೆ ಮೇರೆಗೆ ಎಲ್‌ಐಸಿ ಗೋಲ್ಡನ್ ಜ್ಯುಬಿಲಿ ಫೌಂಡೇಶನ್ ತನ್ನ ಸಿಎಸ್‌ಆರ್‌ ಅನುದಾನದಲ್ಲಿ ಅತ್ಯಾಧುನಿಕ ಮೊಬೈಲ್ ರಕ್ತ ಸಂಗ್ರಹ ವಾಹನವನ್ನು ಕೊಡುಗೆಯಾಗಿ ನೀಡಿದೆ

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಎಂಸಿಆರ್‌ಐ ಗ್ರಾಮೀಣ ಭಾಗದಲ್ಲಿ ರಕ್ತದಾನದ ಅರಿವು ಮೂಡಿಸಲು, ರಕ್ತ ಸಂಗ್ರಹಕ್ಕಾಗಿ "ಮೊಬೈಲ್‌ ರಕ್ತ ಸಂಗ್ರಹ ವಾಹನ " ಪ್ರಾರಂಭಿಸಿದೆ. ಸರ್ಕಾರಿ ಆಸ್ಪತ್ರೆಗಳ ಪೈಕಿ ಕೆಎಂಸಿಆರ್‌ಐ ಈ ರೀತಿಯ ವಾಹನ ಸೌಲಭ್ಯ ಹೊಂದಿರುವುದು ರಾಜ್ಯದಲ್ಲೇ ಮೊದಲು.

ದೇಶದಲ್ಲಿ ರಕ್ತದ ಕೊರತೆಯಿಂದ ಪ್ರತಿದಿನ ನೂರಾರು ಜನ ಮರಣ ಹೊಂದುತ್ತಾರೆ. ಅಪಘಾತಕ್ಕೊಳಗಾದವರು, ಗರ್ಭಿಣಿಯರು ಸೇರಿದಂತೆ ಹಲವರು ಕೆಲವೊಮ್ಮೆ ರಕ್ತದ ಕೊರತೆ ಎದುರಿಸುವುದು ಸಾಮಾನ್ಯ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ಹಲವು ರೀತಿ ಪ್ರಯತ್ನ ಮಾಡುತ್ತ ಬಂದಿದೆ. ಕೆಎಂಸಿಆರ್‌ಐ ವೈದ್ಯಕೀಯ ಮಂಡಳಿಯವರು ಎಲ್ಲ ವ್ಯವಸ್ಥೆಯುಳ್ಳ ವಾಹನಬೇಕೆಂಬ ಕೋರಿಕೆ ಮೇರೆಗೆ ಎಲ್‌ಐಸಿ ಗೋಲ್ಡನ್ ಜ್ಯುಬಿಲಿ ಫೌಂಡೇಶನ್ ತನ್ನ ಸಿಎಸ್‌ಆರ್‌ ಅನುದಾನದಲ್ಲಿ ಅತ್ಯಾಧುನಿಕ ಮೊಬೈಲ್ ರಕ್ತ ಸಂಗ್ರಹ ವಾಹನವನ್ನು ಕೊಡುಗೆಯಾಗಿ ನೀಡಿದೆ.

ಈ ಬಸ್‌ನಲ್ಲಿ ಏನೆಲ್ಲ ಇದೆ?

ಸುಮಾರು ₹43 ಲಕ್ಷ ವೆಚ್ಚ ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ಈ ಬಸ್‌ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇದು ಸಂಪೂರ್ಣ ಹವಾನಿಯಂತ್ರಿಕವಾಗಿದೆ. ಇದರಲ್ಲಿ ಏಕಕಾಲಕ್ಕೆ ನಾಲ್ವರು ರಕ್ತದಾನ ಮಾಡಲು ಬೇಕಾದ ನಾಲ್ಕು ಸ್ಲೀಪಿಂಗ್ ಚೇರ್, ವೈದ್ಯಕೀಯ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್, ನರ್ಸ್‌ಗಳು ಕುಳಿತುಕೊಳ್ಳಲು 8 ಆಸನಗಳ ವ್ಯವಸ್ಥೆ, ರಕ್ತ ಸಂಗ್ರಹಕ್ಕೆ ಬೇಕಾದ ಫ್ರಿಡ್ಜ್, ಸಿಸಿ ಕ್ಯಾಮೆರಾ, ಜನರಲ್ಲಿ ರಕ್ತದ ಅರಿವು ಮೂಡಿಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಎಲ್‌ಇಡಿ ಟಿವಿ ಸೇರಿದಂತೆ ಹಲವು ವಿಶೇಷ ಹೊಂದಿದೆ. ನಿತ್ಯ 50ರಿಂದ 100 ಜನ ಬಸ್‌ನಲ್ಲಿಯೇ ರಕ್ತದಾನ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಕ್ತದಾನಿಗಳು ಇದ್ದಲ್ಲಿಗೆ ಈ ವಾಹನ ತೆರಳಿ ರಕ್ತ ಪಡೆದುಕೊಳ್ಳಲಿದೆ. ಇಲ್ಲಿ ಸಂಗ್ರಹವಾಗುವ ರಕ್ತವನ್ನು ಕೆಎಂಸಿಆರ್‌ಐನಲ್ಲಿರುವ ಬ್ಲಡ್‌ ಬ್ಯಾಂಕ್‌ನಲ್ಲಿ ಸಂಗ್ರಹಿಸಿ ಅವಶ್ಯಕತೆಯಿರುವ ರೋಗಿಗಳಿಗೆ ಬಳಕೆ ಮಾಡಲಾಗುತ್ತದೆ.

ಹಲವು ಬಾರಿ ರಕ್ತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರೂ ನಿಗದಿತ ಪ್ರಮಾಣದಲ್ಲಿ ಬೇಕಾದ ರಕ್ತ ದೊರೆಯುತ್ತಿಲ್ಲ. ಇದರಿಂದಾಗಿ ರಕ್ತದ ಕೊರತೆ ಉಂಟಾಗುತ್ತಿದೆ. ಈ ಮೊದಲು ನಗರ, ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿತ್ತು. ಅಲ್ಲಿ ವೈದ್ಯಕೀಯ ಸಿಬ್ಬಂದಿ ಬೇರೆ ವಾಹನದಲ್ಲಿ ತೆರಳಿ ರಕ್ತವನ್ನು ಸಂಗ್ರಹಿಸುತ್ತಿದ್ದರು. ಈ ವ್ಯವಸ್ಥೆ ಈಗಲೂ ಇದೆ. ಜತೆಗೆ ಸಿಎಸ್‌ಆರ್‌ ಅನುದಾನದಲ್ಲಿ ಖರೀದಿಸಲಾಗಿರುವ ಈ ಬಸ್‌ನಲ್ಲಿ ರಕ್ತದಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಮುಂದೆ ರಕ್ತದ ಕೊರತೆ ತಗ್ಗಿಸಲು ಸಹಕಾರಿಯಾಗಲಿದೆ ಎಂದು ಕೆಎಂಸಿಆರ್‌ಐನ ಅಧೀಕ್ಷಕ ಡಾ. ಈಶ್ವರ ಹಸಬಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಎಲ್ಲೆಲ್ಲಿ ಸಂಚರಿಸಲಿದೆ ಈ ಬಸ್?

ಈ ಬಸ್‌ ಕೇವಲ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿರುವ ಗದಗ, ಹಾವೇರಿ, ಬಾಗಲಕೋಟೆ ಸೇರಿದಂತೆ 8-10 ಜಿಲ್ಲೆಗಳಲ್ಲಿ ಸಂಚರಿಸಿ ರಕ್ತದ ಅವಶ್ಯಕತೆ, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ. ಜತೆಗೆ ರಕ್ತ ಸಂಗ್ರಹಿಸಲು ಬೇಕಾದ ಎಲ್ಲ ವ್ಯವಸ್ಥೆ ಇದರಲ್ಲಿದೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಈ ರೀತಿ ವಾಹನ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿಯ ಕೆಎಂಸಿಆರ್‌ಐ ಪಾತ್ರವಾಗಿದೆ.ಅರಿವು ಮೂಡಿಸಲು ಸಹಕಾರಿ

ಕೆಎಂಸಿಆರ್‌ಐನಲ್ಲಿ ಪ್ರತಿ ವರ್ಷವೂ ರಕ್ತದ ಕೊರತೆ ಹೆಚ್ಚುತ್ತ ಸಾಗಿದೆ. ಈ ಸಮಸ್ಯೆ ನೀಗಿಸಲು ಕೆಎಂಸಿಆರ್‌ಐ ರಕ್ತದಾನ ಶಿಬಿರ ಆಯೋಜಿಸುತ್ತಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ರಕ್ತದಾನದ ಅರಿವು ಮೂಡಿಸಲು, ದಾನಿಗಳಿಂದ ರಕ್ತ ಪಡೆದುಕೊಳ್ಳಲು ಈ ಮೊಬೈಲ್‌ ರಕ್ತ ಸಂಗ್ರಹ ವಾಹನ ಸಹಕಾರಿಯಾಗಲಿದೆ ಎಂದು ಕೆಎಂಸಿಆರ್‌ಐನ ಅಧೀಕ್ಷಕ ಡಾ. ಈಶ್ವರ ಹಸಬಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ
ಭಾರತ ಏಕತೆ, ಶಾಂತಿಯ ಸುಂದರ ತೋಟ: ಡಾ. ಅನ್ನದಾನೀಶ್ವರ ಶ್ರೀ