ದ. ಕ ಜಿಲ್ಲೆಯ ನೊಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಯೋಜನೆಯ ಉದ್ಘಾಟನಾ ಸಮಾರಂಭ ಮತ್ತು ಆರೋಗ್ಯ ಶಿಬಿರ ಮಂಗಳವಾರ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.
ಮೂಡುಬಿದಿರೆ: ರಾಜ್ಯ ಕಾಮಿ೯ಕ ಇಲಾಖೆ ಮತ್ತು ಬ್ಲೋಸಂ ಆಸ್ಪತ್ರೆ ಬೆಂಗಳೂರು ವತಿಯಿಂದ ದ. ಕ ಜಿಲ್ಲೆಯ ನೊಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಯೋಜನೆಯ ಉದ್ಘಾಟನಾ ಸಮಾರಂಭ ಮತ್ತು ಆರೋಗ್ಯ ಶಿಬಿರ ಮಂಗಳವಾರ ಸಮಾಜ ಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್ ಕಾರ್ಮಿಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಚಾರಿ ಆರೋಗ್ಯ ಘಟಕಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಶರೀರದೊಳಗೆ ಯಾವ ತೊಂದರೆಗಳಿವೆ ಎಂಬುದು ಯಾರ ಗಮನಕ್ಕೂ ಬರುವುದಿಲ್ಲ ಅದಕ್ಕಾಗಿ ಕಾರ್ಮಿಕ ಇಲಾಖೆಯು ರೋಗಗಳನ್ನು ಪ್ರಥಮ ಹಂತದಲ್ಲಿಯೇ ಗುರುತಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಘಟಕವನ್ನು ಆರಂಭಿಸುವ ಮೂಲಕ ಉತ್ತಮ ಕೆಲಸವನ್ನು ಕೈಗೊಂಡಿದೆ ಎಂದರು. ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಲು 3ರಿಂದ 5 ಸಾವಿರ ವೆಚ್ಚ ತಗಲುತ್ತದೆ. ಆದರೆ ಸಂಚಾರಿ ಘಟಕವು ಕಾರ್ಮಿಕರ ಮನೆ ಬಾಗಿಲಿಗೆ ಬಂದು ತಪಾಸಣೆ ನಡೆಸಿ ಉಚಿತವಾಗಿ ಔಷಧಿ ನೀಡುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಆಸ್ಪತ್ರೆ ದಾಖಲಾದರೆ ಅದರ ಬಿಲ್ಲನ್ನು ಕಾಮಿ೯ಕ ಇಲಾಖೆಯು ನಂತರ ಭರಿಸುತ್ತದೆ ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಟ್ಟಡ ಕಾರ್ಮಿಕರೆಂದರೆ ಕೇವಲ ಫ್ಲ್ಯಾಟ್ ನಿಮಾ೯ಣ ಮಾಡುವವರು ಮಾತ್ರ ಅಲ್ಲ ಮನೆ ನಿರ್ಮಿಸುವವರು ಕೂಡಾ ಕಟ್ಟಡ ಕಾರ್ಮಿಕರೇ. ಈ ಹಿಂದೆ ಆರೋಗ್ಯ ಮತ್ತು ಕಾಮಿ೯ಕ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ಮಲ್ಲಿಕಾರ್ಜುನ ಖಗೆ೯ ಅವರು ಕಾರ್ಮಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸವಲತ್ತು ಸಿಗುವಂತೆ ಮಾಡಿದ್ದರು. ಇದೀಗ ಸಂತೋಷ್ ಲಾಡ್ ಅವರು ಕಟ್ಟಡ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಸವಲತ್ತುಗಳಿಂದ ವಂಚಿತರಾದವರನ್ನು ಗುರುತಿಸಿ ಸಹಕಾರ ನೀಡುವಂತಹ ಕೆಲಸಗಳನ್ನು ಇಲಾಖೆ ಮಾಡಬೇಕಾಗಿದೆ ಎಂದರು.
ಬ್ಲಾಸಂ ಸಂಸ್ಥೆಯ ಯೋಜನಾ ಮುಖ್ಯಸ್ಥರಾದ ಪ್ರವೀಣ್, ಮಂಗಳೂರು ವಿಭಾಗದ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.