ಬಲ್ಲಮಾವಟಿ ಗ್ರಾಪಂ ವ್ಯಾಪ್ತಿಯ ಬಲ್ಲಮಾವಟಿ, ಪುಲಿಕೋಟು ಮತ್ತು ಪೇರೂರು ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದು, ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬಲ್ಲಮಾವಟಿ ಗ್ರಾಪಂ ವ್ಯಾಪ್ತಿಯ ಬಲ್ಲಮಾವಟಿ, ಪುಲಿಕೋಟು ಮತ್ತು ಪೇರೂರು ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದು, ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ.ಸಮಸ್ಯೆ ಕೂಡಲೇ ಸರಿಪಡಿಸಬೇಕು. ತಪ್ಪಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪುಲಿಕೋಟು ಗ್ರಾಮದ ಕಾಫಿ ಬೆಳೆಗಾರ ಮಣವಟ್ಟಿರ ದಯಾ ಚಿಣ್ಣಪ್ಪ ಎಚ್ಚರಿಸಿದ್ದಾರೆ. ಇಲ್ಲಿಯ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವರ್ಗದ ಜನರಿಗೆ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದೆ. ವಿದ್ಯಾರ್ಥಿಗಳು, ಯುವ ಜನರು ಕೆಲಸ ನಿರ್ವಹಿಸಲು, ಓದಲು ಸಮಸ್ಯೆಯಾಗಿದೆ. ಬಲ್ಲಮಾವಟಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಇದೆ. ಇಲ್ಲೂ ಜನಸಾಮಾನ್ಯರು ದೈನಂದಿನ ವ್ಯವಹಾರಗಳಿಗೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ಪಡಿತರ ಪಡೆಯಲು ಸಹ ನೆಟ್ ವರ್ಕ್ ಸಮಸ್ಯೆಯಿಂದಾಗಿ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಬಳಕೆದಾರರಿಗೆ ನೆಟ್ ವರ್ಕ್ ಪೂರೈಸುವಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪೇರೂರು ಗ್ರಾಮದ ಕಾಫಿ ಬೆಳೆಗಾರ ತೋಲಂಡ ಪೂಣಚ್ಚ ಮಾತನಾಡಿ, ಗ್ರಾಮ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಬಿಎಸ್ಎನ್ಎಲ್, ಏರ್‌ಟೆಲ್, ಜಿಯೋ ಯಾವುದೇ ನೆಟ್ ವರ್ಕ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಡಿಜಿಟಲ್ ವ್ಯವಸ್ಥೆ ಜನಸಾಮಾನ್ಯರಿಗೆ ತೀರಾ ಅವಶ್ಯಕವಾಗಿದ್ದು, ಬಳಕೆದಾರರು ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ನೆಟ್ ವರ್ಕ್ ಸೌಲಭ್ಯ ಕಲ್ಪಿಸಲು ಶಾಸಕರು ಹಾಗೂ ಸಂಸದರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಪುಲಿಕೋಟು ಗ್ರಾಮದ ಕಾಫಿ ಬೆಳೆಗಾರರಾದ ಮಣವಟ್ಟಿರ ಹರೀಶ್ ಸುಬ್ಬಯ್ಯ, ಮಣವಟ್ಟೀರ ಹ್ಯಾರಿ ಕರುಂಬಯ್ಯ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.