ಮೈಸೂರು: ನಗರದ ಸರಸ್ವತಿಪುರಂನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಮೊಬೈಲ್ ಫೋಟೋಗ್ರಫಿ ಹಾಗೂ ವಿಡೀಯೋಗ್ರಫಿಯ ಕಾರ್ಯಾಗಾರವನ್ನು ಭಾನುವಾರ ಏರ್ಪಡಿಸಲಾಗಿತ್ತು.
ವೈದ್ಯರು, ಸಾಫ್ಟ್‌ವೇರ್ ಎಂಜಿನಿಯರ್ಸ್, ಬ್ಯಾಂಕ್ ಮ್ಯಾನೇಜರ್‌ಗಳು, ಶಿಕ್ಷಕರು, ಉದ್ಯಮಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅನುಭವಿ ಛಾಯಾಗ್ರಾಹಕರಾದ ಬಿ.ಎಸ್. ರಾಜಾರಾಂ ಹಾಗೂ ಜಿ.ಎಲ್. ತ್ರಿಪುರಾಂತಕ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು.
ಮೊಬೈಲ್ ಕ್ಯಾಮೆರಾದಲ್ಲಿ ಉತ್ತಮ ಚಿತ್ರ ಹಾಗೂ ವಿಡೀಯೋಗಳನ್ನು ಸೆರೆ ಹಿಡಿಯುವ ಕೌಶಲ್ಯ ಅಷ್ಟೇ ಅಲ್ಲದೆ ಸುಲಭವಾಗಿ ಎಡಿಟ್ ಮಾಡಬಹುದಾದ ತಂತ್ರಜ್ಞಾನವನ್ನು ಈ ಒಂದು ದಿನದ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಾಯಿತು. ಸಾಮಾಜಿಕ ಜಾಲತಾಣಗಳಿಗೆ ಉಪಯುಕ್ತವಾದ ಫೋಟೋ ಹಾಗೂ ವಿಡೀಯೋಗಳನ್ನು ಅಪ್ ಲೋಡ್ ಮಾಡುವ ಕುರಿತು ಅಗತ್ಯ ಮಾಹಿತಿ ನೀಡಲಾಯಿತು. ಸ್ಥಳದಲ್ಲಿಯೇ ಒಂದು ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿ, ಉತ್ತಮ ಚಿತ್ರ ಸೆರೆಹಿಡಿದ ಡಾ.ಬಿ.ಸಿ. ಜಗನ್ನಾಥ ಹಾಗು ಅಶ್ವಿನ್ ಅವರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸದಸ್ಯರಿಗೂ ಕೊನೆಯಲ್ಲಿ ಪ್ರಮಾಣ ಪತ್ರ ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದಿದ್ದ 60ಕ್ಕೂ ಹೆಚ್ಚು ಅತ್ತ್ಯುತ್ತಮ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದುದು ವಿಶೇಷವಾಗಿತ್ತು.