ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ: ಹರೀಶ್

KannadaprabhaNewsNetwork |  
Published : Jan 19, 2026, 12:15 AM IST
ಸಿಕೆಬಿ-2 ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಪ್ರಜ್ವಲ್, ಕೋಚ್ ಬಾಲಾಜಿ ಹಾಗೂ ಕ್ರಿಕೆಟ್ ಕೋಚ್ ಉತ್ತಮ್ ರನ್ನು  ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಮಕ್ಕಳು ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವುದು ಅಗತ್ಯವಿದೆ .

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಒಲವು ತೋರುತ್ತಿರುವುದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪೋಷಕರು ಮಕ್ಕಳಿಗೆ ಸಾಧ್ಯವಾದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಪ್ರೆಸಿಡೆನ್ಸಿ ಶಾಲೆಯ ಮುಖ್ಯೋಪಾಧ್ಯಾಯ ಹರೀಶ್ ತಿಳಿಸಿದರು.

ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ನಡೆದ ವಿಕ್ಟರಿ ಕಾರ್ನಿವಲ್ ಸ್ಪೋರ್ಟ್ಸ್ ಮೀಟ್ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ, ಮಕ್ಕಳು ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವುದು ಅಗತ್ಯವಿದೆ . ನಮ್ಮ ಶಾಲೆಯಲ್ಲಿ ಮಕ್ಕಳನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೇ, ನಿರಂತರವಾಗಿ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಫುಟ್ಬಾಲ್ ಆಟಗಾರ ಪ್ರಜ್ವಲ್ ಮಾತನಾಡಿ, ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುವ ಜತೆಗೆ ಶಿಸ್ತು, ಸಮಯ ಪ್ರಜ್ಞೆ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲಿವೆ. ಕ್ರೀಡೆಗಳಲ್ಲಿ ಭಾಗಿಯಾಗುವುದು ವಿದ್ಯಾರ್ಥಿ ಜೀವನದ ಮುಖ್ಯವಾದ ಭಾಗ. ಈ ಅವಧಿಯಲ್ಲಿ ನಿಮಗೆ ಇಷ್ಟವಾದ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಇದರಿಂದಾಗಿ ನಾನು ಏನಾಗಬಲ್ಲೆ ಎಂಬ ಬಗ್ಗೆ ನಿಮ್ಮ ದಾರಿ ಮತ್ತು ಗುರಿ ಸ್ಪಷ್ಟವಾಗುತ್ತದೆ. ಯಾರನ್ನೋ ಅನುಕರಣೆ ಮಾಡುವ ಬದಲಿಗೆ ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆಯಿರಲಿ. ಯಾರು ಕ್ರೀಡೆಗಳನ್ನು ನಂಬುತ್ತಾರೋ ಅವರಿಗೆ ಕ್ರೀಡೆಗಳೇ ಕೈಹಿಡಿದು ನಡೆಸಿ ಗೌರವ ತಂದು ಕೊಡುತ್ತವೆ. ದೇಶದಲ್ಲಿ ಕ್ರೀಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಶಾಲಾ ಕಾಲೇಜು ಹಂತದಲ್ಲಿಯೇ ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಡುಕಿ ಅವರಿಗೆ ಸೂಕ್ತ ತರಬೇತಿ ನೀಡುವ ಕೆಲಸವಾಗುತ್ತಿದೆ ಎಂದರು.

ಶಾಲೆಯ ಪ್ರಾಂಶುಪಾಲ ಮುಷ್ತಾಕ್ ಅಹ್ಮದ್ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಗೇಮ್‌ಗಳಲ್ಲಿ ತೊಡಗಿರುವುದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮಕ್ಕಳು ದಿನನಿತ್ಯ ಕನಿಷ್ಠ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು. ಅಲ್ಲದೆ ಕ್ರೀಡೆಯಲ್ಲಿ ಹೆಸರು ಗಳಿಸಿರುವ ಕ್ರೀಡಾಪಟುಗಳನ್ನು ಪ್ರೇರಣೆಯಾಗಿ ಪಡೆದು ದೇಶಕ್ಕೆ ಕೀರ್ತಿ ತರುವಂತೆ ಕರೆ ನೀಡಿದರು.

ಕ್ರೀಡಾಕೂಟದಲ್ಲಿ ಫುಟ್ಬಾಲ್ ಕೋಚ್ ಬಾಲಾಜಿ ಹಾಗೂ ಕ್ರಿಕೆಟ್ ಕೋಚ್ ಉತ್ತಮ್ ಅವರು ಭಾಗವಹಿಸಿ ಮಕ್ಕಳಿಗೆ ಕ್ರೀಡಾ ಸ್ಫೂರ್ತಿ ತುಂಬಿದರು. ಇಂದಿನ ಮಕ್ಕಳು ದೇಶದ ಭವಿಷ್ಯವಾಗಿದ್ದು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲೂ ಭಾಗವಹಿಸಿ ಉತ್ತಮ ನಾಗರಿಕರಾಗಿ ದೇಶಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಬ್ಯಾಕ್ ವಾಕ್, ಲೆಮನ್ ಓಟ, ಜಂಪಿಂಗ್ ವಿತ್ ಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

ಇದೇ ವೇಳೆ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಪ್ರಜ್ವಲ್, ಕೋಚ್ ಬಾಲಾಜಿ ಹಾಗೂ ಕ್ರಿಕೆಟ್ ಕೋಚ್ ಉತ್ತಮ್ ರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಹೇಮಾವತಿ, ಜಬೀನ್, ಮುಬಾರಿಕ್, ಅರ್ಷಿಯ, ಅತಿಯಾ, ಪವಿತ್ರ, ಮೋಹನ್, ಅನಿತಾ, ಬಾಬು, ಸತೀಶ್ ಕುಮಾರ್ ಹಾಗೂ ಸಬೀಹಾ, ವಿದ್ಯಾರ್ಥಿಗಳು, ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಪಿಡುಗುಗಳ ದೂರಗೊಳಿಸಲು ಸಾಧ್ಯ: ಸಮಾಜ ಸೇವಕ ಡಾ.ಟಿ.ಶ್ರೀನಿವಾಸಪ್ಪ
ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಗೆ ಸಂಭ್ರಮದ ರಥೋತ್ಸವ