ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ವಿಪತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯಿತು.
ವಿವಿಧ ಇಲಾಖೆಗಳ ಸಿಬ್ಬಂದಿ ಪ್ರವಾಹ ಸಂದರ್ಭದಲ್ಲಿ ಎದುರಾಗುವ ವಿಪತ್ತು, ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ತೋರಿಸಿದರು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ವ್ಯಕ್ತಿ ಮುಳುಗುತ್ತಿರುವ ಸಮಯದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ದೋಣಿಯಲ್ಲಿ ರಕ್ಷಣೆ ಮಾಡುವ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ನದಿಯಿಂದ ಹೊರತಂದು ಪ್ರಥಮ ಚಿಕಿತ್ಸೆ ಕೊಡಿಸುವುದು ಮತ್ತು ಅಲ್ಲಿಂದ ಪಾರಾಗುವುದರ ಉಪಾಯಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಮಾತನಾಡಿ, ಪ್ರವಾಹ ನಿರ್ವಹಣೆಗೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಜಿಲ್ಲಾಡಳಿತ ಮಾಡಿಕೊಂಡಿದ್ದು, ವಿವಿಧ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡುವುದರ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.ಭಯ ಬೇಡ, ಅಗತ್ಯ ವ್ಯವಸ್ಥೆ : ಪ್ರವಾಹದ ಸಂದರ್ಭದಲ್ಲಿ ಮುಳುಗಡೆಯಾಗುವ ಗ್ರಾಮದವರು ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಒಂದು ವೇಳೆ ನದಿಯಲ್ಲಿ ನೀರು ಹೆಚ್ಚಾದರೂ ಗ್ರಾಮ ತೊರೆದು ಪರಿಹಾರ ಕೇಂದ್ರಗಳಿಗೆ ತೆರಳಬೇಕು. ತಾಲೂಕಾಡಳಿತ ಅಗತ್ಯ ವ್ಯವಸ್ಥೆ ಮಾಡಲಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.
ತಹಸೀಲ್ದಾರ ಗಿರೀಶ ಸ್ವಾದಿ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.