ನವೆಂಬರ್‌ 16, 17ರಂದು ಕವಿವಿಯಲ್ಲಿ ಮಾದರಿ ಬ್ರಿಕ್ಸ್ ಶೃಂಗಸಭೆ

KannadaprabhaNewsNetwork |  
Published : Nov 13, 2026, 02:00 AM IST
ಪ್ರೊ.ಎ.ಎಂ. ಖಾನ್‌ | Kannada Prabha

ಸಾರಾಂಶ

ನವದೆಹಲಿಯ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯವು ನ. 16 ಮತ್ತು 17ರಂದು ವಿವಿ ಸೆನೆಟ್ ಸಭಾಂಗಣದಲ್ಲಿ ಮಾದರಿ ಬ್ರಿಕ್ಸ್ ಶೃಂಗಸಭೆ ಆಯೋಜಿಸಿದೆ.

ಧಾರವಾಡ:

ನವದೆಹಲಿಯ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯವು ನ. 16 ಮತ್ತು 17ರಂದು ವಿವಿ ಸೆನೆಟ್ ಸಭಾಂಗಣದಲ್ಲಿ ಮಾದರಿ ಬ್ರಿಕ್ಸ್ ಶೃಂಗಸಭೆ ಆಯೋಜಿಸಿದೆ ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬ್ರಿಕ್ಸ್ ಸಂಘಟನೆಯ ಕಾರ್ಯವೈಖರಿ, ಅಂತಾರಾಷ್ಟ್ರೀಯ ಸಂಬಂಧ, ಜಾಗತಿಕ ಆಡಳಿತ ವ್ಯವಸ್ಥೆ, ಬಹುಪಕ್ಷೀಯ ಸಹಕಾರ ಹಾಗೂ ಸಮಕಾಲೀನ ಜಾಗತಿಕ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಆಳವಾದ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಅಲ್ಲದೇ, ರಾಜತಾಂತ್ರಿಕ ಸಂವಾದ, ನಾಯಕತ್ವ ಗುಣಗಳು, ಮಾತುಕತೆ ಕೌಶಲ್ಯ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತದ ಪಾತ್ರದ ಕುರಿತು ಪ್ರಾಯೋಗಿಕ ಜ್ಞಾನ ಒದಗಿಸುವ ವೇದಿಕೆ ಇದಾಗಲಿದೆ ಎಂದರು.

ಬ್ರಿಕ್ಸ್ ಮೂಲತಃ 11 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಜಾಗತಿಕ ಸಂಘಟನೆಯಾಗಿದ್ದು, 10 ಪಾಲುದಾರ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಮಾದರಿ ಬ್ರಿಕ್ಸ್ ಶೃಂಗಸಭೆ ಆಯೋಜಿಸುತ್ತಿದೆ. ಈ ಮಹತ್ವದ ಅವಕಾಶವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಮ್ಮ ವಿಶ್ವವಿದ್ಯಾಲಯಕ್ಕೆ ಕಲ್ಪಿಸಿದೆ ಎಂದ ಅವರು, ನ. 16ರ ಮಧ್ಯಾಹ್ನ 2ಕ್ಕೆ ಉದ್ಘಾಟನೆ ನಡೆಯಲಿದ್ದು, ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಂಭು ಎಲ್. ಹಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ರಾಜತಾಂತ್ರಿಕತೆ, ಬಹುಪಕ್ಷೀಯ ಸಂಸ್ಥೆಗಳ ಕಾರ್ಯವೈಖರಿ ಹಾಗೂ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಸಂಘಟನೆಯ ಮಹತ್ವ ಮತ್ತು ಭಾರತದ ಪಾತ್ರವನ್ನು ಅರಿತುಕೊಳ್ಳಲು ಈ ಶೃಂಗಸಭೆ ಉತ್ತಮ ಅವಕಾಶ ಕಲ್ಪಿಸಲಿದ್ದು, ಎರಡು ದಿನಗಳ ಕಾಲಈ ಕುರಿತು ವಿವಿಧ ಗೋಷ್ಠಿಗಳು ಜರುಗಲಿವೆ ಎಂದರು.

ಇದಲ್ಲದೇ ನ. 14ರ ಸಂಜೆ 4.30ಕ್ಕೆ ಕವಿವಿ ಗೋಲ್ಡನ್ ಜ್ಯುಬಿಲಿ ಸಭಾಭವನದಲ್ಲಿ ಕವಿವಿ ಮತ್ತು ಕೌಸಾಳಿ ವಿಭಾಗದ ವತಿಯಿಂದ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಉದ್ಯೋಗಾವಕಾಶ, ಅಭಿವೃದ್ಧಿ, ಉದ್ಯಮಶೀಲತೆ ವಿಷಯದ ಕುರಿತು ಉಪನ್ಯಾಸ ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕವಿವಿ ಪತ್ರಿಕೋದ್ಯಮ ಮುಖ್ಯಸ್ಥ ಜೆ.ಎಂ. ಚಂದುನವರ ಇದ್ದರು.

19ರಂದು ಅರಿವೇ ಗುರು ಪ್ರಶಸ್ತಿ ಪ್ರದಾನ

ಕವಿವಿಯಿಂದ ರಾಜ್ಯೋತ್ಸವದ ನಿಮಿತ್ತ 2025 ಮತ್ತು 2026ನೇ ಸಾಲಿನ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭ ನ. 19ರ ಬೆಳಗ್ಗೆ 11.30ಕ್ಕೆ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಗಮಿಸಲಿದ್ದಾರೆ. ಕಳೆದ ವರ್ಷದ ಮೂವರು ಗಣ್ಯರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಪ್ರಸಕ್ತ ವರ್ಷದ ಮೂವರ ಗಣ್ಯರ ಹೆಸರು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿವೆ. ಒಟ್ಟು ಆರು ಗಣ್ಯರಿಗೆ ಅರಿವೇ ಗುರು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

-ಪ್ರೊ.ಎ.ಎಂ. ಖಾನ್‌, ಕವಿವಿ ಕುಲಪತಿಗಳು

ಕವಿವಿ ತನ್ನ ಆಸ್ತಿ ಸಮೀಕ್ಷೆಯ ಕಾಲದಲ್ಲಿ ಒಟ್ಟು 888 ಎಕರೆ ಜಾಗೆ ಪೈಕಿ 700 ಎಕರೆ ಜಾಗೆಯ ದಾಖಲೆಗಳು ಲಭಿಸಿವೆ. ಮೇಲ್ನೋಟಕ್ಕೆ ಸುಮಾರು 200 ಎಕರೆ ಜಾಗೆ ಒತ್ತುವರಿ ಆಗಿರುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದ್ದು ಮುಂದಿನ ತಿಂಗಳು ಸಭೆ ನಡೆಸಲು ತೀರ್ಮಾನಿಸಲಾಗಿದೆ. ವಿವಿಯ ಕಳೆದುಕೊಂಡ ಜಾಗವನ್ನು ಮರಳಿ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕುಲಪತಿ ಪ್ರೊ.ಖಾನ್‌ ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌