ವಿದ್ಯಾವರ್ಧಕ ಕನ್ನಡ ಸೇವೆ ರಾಜ್ಯಕ್ಕೆ ಮಾದರಿ: ಗುರುಬಸವ ಪಟ್ಟದ್ದೇವರು

KannadaprabhaNewsNetwork |  
Published : Mar 20, 2024, 01:20 AM IST
ಚಿತ್ರ 17ಬಿಡಿಆರ್56 | Kannada Prabha

ಸಾರಾಂಶ

ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ನಡೆದ ಕರ್ನಾಟಕ-50 ಸಂಭ್ರಮ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಚಾರ ಸಂಕಿರಣ, ಕವಿಗೋಷ್ಠಿ ಸಮಾರಂಭ ಬೀದರ್ ಮಾಂಜ್ರಾ ಬ್ಯಾಂಕ್‌ನ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸೇವೆ ರಾಜ್ಯಕ್ಕೆ ಮಾದರಿ ಎನಿಸಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪ ಸಭಾಂಗಣದಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿ ಕರ್ನಾಟಕ-50 ಸಂಭ್ರಮ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಚಾರ ಸಂಕಿರಣ, ಕವಿಗೋಷ್ಠೀ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮರಾಠಿ ಪ್ರಾಬಲ್ಯ ಹೊಂದಿದ ಧಾರವಾಡ ಭಾಗದಲ್ಲಿ ಕನ್ನಡ ಭಾಷೆ ಕಟ್ಟಿದ ಶ್ರೇಯಸ್ಸು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ ಎಂದರು.

ಸುದೀರ್ಘ 134 ವರ್ಷಗಳ ಇತಿಹಾಸ ಹೊಂದಿರುವ ಈ ಸಂಘ ನಿಸ್ವಾರ್ಥವಾಗಿ ಕನ್ನಡದ ಸೇವೆ ಮಾಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಸಂಸ್ಥಾಪಕ ರಾ.ಹ.ದೇಶಪಾಂಡೆ, ಪಾಟೀಲ್ ಪುಟ್ಟಪ್ಪ, ಚಂದ್ರಕಾಂತ ಬೆಲ್ಲದ ಎಲ್ಲರೂ ಕನ್ನಡ ಭಾಷೆ ಜತೆಗೆ ಸಂಘದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಹಿರೇಮಠ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧ ಇದೆ. ಆ ಭಾಗದಲ್ಲಿ ವಿದ್ಯಾವರ್ಧಕ ಸಂಘ ಕನ್ನಡ ಕಟ್ಟಿದ ರೀತಿಯಲ್ಲಿ ಈ ಭಾಗದಲ್ಲಿ ಪಟ್ಟದ್ದೇವರು ಗಡಿ ಪ್ರದೇಶವನ್ನು ಕನ್ನಡದ ನೆಲದಲ್ಲಿ ಉಳಿಸಿದ್ದಾರೆ. ಹೀಗಾಗಿ ವಿದ್ಯಾವರ್ಧಕ ಸಂಘ ಹಾಗೂ ಮಠದ ಧ್ಯೇಯ ಒಂದೇಯಾಗಿದ್ದು ಕನ್ನಡದ ಅಸ್ಮಿತೆಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಬೀದರ್ ಮಾಂಜ್ರಾ ಬ್ಯಾಂಕ್‌ನ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಪರಿಶ್ರಮದ ಪರಿಣಾಮ ಕನ್ನಡದ ಅಸ್ಮಿತೆ ಉಳಿದಿದೆ. ವಿದ್ಯಾವರ್ಧಕ ಸಂಘ ಕೂಡ ಕನ್ನಡಕ್ಕೆ ಕಟಿಬದ್ಧವಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ವಧಕ ಸಂಘ, ಭಾಲ್ಕಿ ಹಿರೇಮಠ ಸಂಸ್ಥಾನ ತಮ್ಮದೇ ಆದ ಇತಿಹಾಸ ಹೊಂದಿದ್ದು ಕನ್ನಡಕ್ಕಾಗಿ ವಿಶಿಷ್ಟ ಕೊಡುಗೆ ನೀಡಿವೆ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬೀದರ್ ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಪ್ರಾಚಾರ್ಯ ಬಸವರಾಜ ಮೊಳಕೀರೆ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಶೇಖರ ಕುಂಬೆ, ಶಿವಾನಂದ ಭಾವಿಕಟ್ಟಿ, ಸಂಜು ಕುಲಕರ್ಣಿ, ಮಹೇಶ ಗೋರನಾಳಕರ ಸೇರಿ ಹಲವರಿದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿ, ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.

ಗಮನ ಸೆಳೆದ ಪ್ರದರ್ಶನ:

ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ, ನಾಡು ನುಡಿಗಾಗಿ ಶ್ರಮಿಸಿದ ಮಹನೀಯರ ಲೇಖನಗಳು ಗಮನ ಸೆಳೆದವು. ಕನ್ನಡಕ್ಕಾಗಿ ವಿಶಿಷ್ಟ ಕೊಡುಗೆ ನೀಡಿದ ಕುವೆಂಪು, ದ.ರಾ.ಬೇಂದ್ರೆ, ಗದಗ ಶ್ರೀಗಳು, ಭಾಲ್ಕಿ ಶ್ರೀಗಳು ಸೇರಿ ಮುಂತಾದ ಸಾಧಕರ ಕುರಿತು ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು ಅನಾವರಣಗೊಂಡಿದ್ದು ಗಮನ ಸೆಳೆಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌