ಪುರಸಭೆ ಸದಸ್ಯನ ಪರಿಸರ ಕಾಳಜಿ ಮಾದರಿ

KannadaprabhaNewsNetwork |  
Published : Jun 05, 2025, 02:49 AM IST
ಮುಂಡರಗಿ 22ನೇ ವಾರ್ಡ್‌ನ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬೆಳೆದು ನಿಂತಿರುವ ಗಿಡಗಳು | Kannada Prabha

ಸಾರಾಂಶ

ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬೇವು, ಅತ್ತಿ, ಆಲ, ಹೊಂಗೆ, ಚೆರಿ, ಕಸಕಸಿ, ಸುಬಾಬುಲ್, ಬನ್ನಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮರಗಳು ಬೆಳೆದಿವೆ.

ಶರಣು ಸೊಲಗಿ ಮುಂಡರಗಿ

ಪುರಸಭೆಯ 22ನೇ ವಾರ್ಡ್‌ನಲ್ಲಿ ಸದಸ್ಯ ಲಿಂಗರಾಜಗೌಡ ಪಾಟೀಲ ಅವರ ಪರಿಸರ ಕಾಳಜಿ ನಿಜಕ್ಕೂ ಮಾದರಿ.

ಸದಸ್ಯರಾದ ಪ್ರಾರಂಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ಸಾರ್ವಜನಿಕರ ಸಹಕಾರದೊಂದಿಗೆ 22ನೇ ವಾರ್ಡ್‌ನಲ್ಲಿ ಬರುವ ಕೈಗಾರಿಕಾ ಹೊಸಹತು ಪ್ರದೇಶ, ಬ್ಯಾಲವಾಡಗಿ ಹಾಗೂ ಜೆ.ಎಚ್. ಪಟೇಲ್ ನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಸಸಿ ನೆಟ್ಟರು. ಸುಮಾರು 5-6 ವರ್ಷಗಳಲ್ಲಿ ಅವು ಬೆಳೆದು ಮರವಾಗಿ ನಿಂತಿವೆ.

ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬೇವು, ಅತ್ತಿ, ಆಲ, ಹೊಂಗೆ, ಚೆರಿ, ಕಸಕಸಿ, ಸುಬಾಬುಲ್, ಬನ್ನಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮರಗಳು ಬೆಳೆದಿವೆ. ಕೇವಲ ಸಸಿ ಹಚ್ಚುವುದು ಅಷ್ಟೇ ಅಲ್ಲ, ಅವುಗಳಿಗೆ ನಿರಂತರವಾಗಿ ನೀರು ಹಾಕಿಸುವುದು ಹಾಗೂ ಗಿಡಗಳಿಗೆ ನೀರು ನಿಲ್ಲುವಂತೆ ತಗ್ಗು ಮಾಡಿಸುವುದು, ಗಿಡಗಳು ಬೀಳದಂತೆ ಮುಳ್ಳು ಕಟ್ಟಿಸುವುದು, ದುಷ್ಕರ್ಮಿಗಳು ಮರ ಕಡಿಯದಂತೆ ಸಂರಕ್ಷಿಸುವ ಕಾರ್ಯ ಮಾಡಿದ್ದಾರೆ.

ಇದೀಗ ಈ ಕೈಗಾರಿಕಾ ವಸಾಹತು ಪ್ರದೇಶ ಹಸಿರು ಬನದಂತೆ ನಿರ್ಮಾಣವಾಗಿದೆ. ಪಟ್ಟಣದ ಅನೇಕರು ಹಿರಿಯ ನಾಗರಿಕರು ಬೆಳಗ್ಗೆ ಮತ್ತು ಸಂಜೆ ಅಲ್ಲಿಗೆ ವಾಯುವಿಹಾರಕ್ಕೆ ಬಂದರೆ ಉತ್ತಮವಾದ ಪ್ರಾಣವಾಯು ದೊರೆಯಲು ಇದೊಂದು ಹೇಳಿ ಮಾಡಿಸಿದ ಸ್ಥಳವಾಗಿದೆ.

ಲಿಂಗರಾಜಗೌಡ ಪಾಟೀಲರು ಈ ಹಿಂದೆ 21ನೇ ವಾರ್ಡ್‌ನ ಸದಸ್ಯರಾಗಿದ್ದಾಗಲೂ ಸಹ ಅಂಬಾಭವಾನಿ ನಗರದ ಎಲ್ಲ ರಸ್ತೆಗಳಲ್ಲಿ ನೂರಾರು ಸಸಿಗಳನ್ನು ಹಚ್ಚಿಸಿದ್ದರು. ಆಗಲೂ ಸಹ ಅಲ್ಲಿನ ಜನತೆಯ ಸಹಕಾರದಿಂದ ಅವುಗಳನ್ನು ಬೆಳೆಸಿದ್ದರು. ಅವು ಬೆಳೆದು ನೆರಳು ನೀಡುತ್ತಿವೆ. ಒಬ್ಬ ಪುರಸಭೆ ಸದಸ್ಯರಾಗಿ ವಾರ್ಡ್‌ನಲ್ಲಿ ನೀರು, ಬೆಳಕು, ರಸ್ತೆ, ಸ್ವಚ್ಛತೆ ಕಾರ್ಯ ಮಾಡಿಸುವುದು ಸಹಜ. ಅವುಗಳ ಜತೆಗೆ ಪರಿಸರ ಸಂರಕ್ಷಣೆ ಮಾಡುವ ಗಿಡ-ಮರಗಳ ಸಂರಕ್ಷಣೆ ಮಾಡುವುದು ಶ್ಲಾಘನೀಯ ಕಾರ್ಯವಾಗಿದೆ.

ಅತಿಯಾದ ವಾಹನಗಳ ಭರಾಟೆ, ಮಸಿನರಿಗಳ ಬಳಕೆಯ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಹಾಗೂ ಪಕ್ಷದ ಹಿರಿಯ ಮುಖಂಡರ, ನನ್ನ ವಾರ್ಡ್‌ನ ಜನತೆಯ ಸಹಕಾರದಿಂದ ಈ ಕಾರ್ಯ ಮಾಡಿರುವೆ ಎಂದು 22ನೇ ವಾರ್ಡ್‌ನ ಸದಸ್ಯ ಲಿಂಗರಾಜಗೌಡ ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!