ಆಧುನಿಕತೆಯ ಬದುಕು ಜಾತಿ-ಧರ್ಮ ಮೀರಲು ಪ್ರಯತ್ನಿಸಿ

KannadaprabhaNewsNetwork | Published : Apr 24, 2025 11:45 PM

ಸಾರಾಂಶ

ಕಾಶ್ಮೀರದಲ್ಲಿ ಉಗ್ರರ ನಡೆಸಿದ ದಾಳಿ ಅತ್ಯಂತ ಅಮಾನುಷವಾದದ್ದು. ಧರ್ಮ ಕಾರಣಕ್ಕಾಗಿ ನಡೆಯುವ ಇಂತಹ ದಾಳಿಗಳು ಅತ್ಯಂತ ಮಾನವೀಯ ಹಾಗೂ ಖಂಡನಾರ್ಹ

ಬಳ್ಳಾರಿ: ಆಧುನಿಕತೆಯ ಬದುಕು ಜಾತಿ-ಧರ್ಮ ಮೀರಲು ಪ್ರಯತ್ನಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೊಟ್ರಪ್ಪ ಚಿರಬಿ ತಿಳಿಸಿದರು.

ನಗರದ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ವಿಭಾಗ ಸಹಯೋಗದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಚೀನ ಮತ್ತು ನಡುಗನ್ನಡ ಕನ್ನಡ ಕಾವ್ಯಗಳ ಪಕ್ಷಿನೋಟ ಕುರಿತು ಮಾತನಾಡಿದರು.

ಕಾಶ್ಮೀರದಲ್ಲಿ ಉಗ್ರರ ನಡೆಸಿದ ದಾಳಿ ಅತ್ಯಂತ ಅಮಾನುಷವಾದದ್ದು. ಧರ್ಮ ಕಾರಣಕ್ಕಾಗಿ ನಡೆಯುವ ಇಂತಹ ದಾಳಿಗಳು ಅತ್ಯಂತ ಮಾನವೀಯ ಹಾಗೂ ಖಂಡನಾರ್ಹ. ಜೀವ ಪರವಾಗಿ ಆಲೋಚಿಸುವುದರಿಂದ ಮಾತ್ರ ಮನುಷ್ಯತ್ವ ನೆಲೆಯಲ್ಲಿ ಸಮಾಜ ಕಟ್ಟಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣದ ಆಶಯ ಬಲಗೊಳ್ಳುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕನ್ನಡ ಕಾವ್ಯ ಹುಟ್ಟಿದ ಬಗೆ, ಪ್ರಾಚೀನ ಮತ್ತು ನಡುಗನ್ನಡ ಕನ್ನಡ ಕಾವ್ಯ ಪ್ರಕಾರಗಳಲ್ಲಿನ ವೈಶಿಷ್ಟ್ಯ ಕುರಿತು ವಿವರಿಸಿದರಲ್ಲದೆ ವಿದ್ಯಾರ್ಥಿಗಳು ಸೃಜನಶೀಲ ಸಾಹಿತ್ಯಕ್ಕೆ ದೊಡ್ಡಮಟ್ಟದಲ್ಲಿ ಪ್ರವೇಶ ಪಡೆಯಬೇಕು. ಸಾಹಿತ್ಯ ಬಹುಪಾಲು ಶೋಷಿತರ ಪರ ಜನಪರ, ಜೀವಪರವಾಗಿ ಆಲೋಚಿಸುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದೆ. ಕನ್ನಡ ಕಾವ್ಯ ಆಸಕ್ತ ಓದುಗ ವಿದ್ಯಾರ್ಥಿಗಳು ಪ್ರಾಚೀನ ಹಾಗೂ ನಡುಗನ್ನಡದಲ್ಲಿನ ಮೂಲ ದ್ರವ್ಯವನ್ನು ಅರಿಯಬೇಕು. ಕನ್ನಡ ಸಾಹಿತ್ಯ ಚರಿತ್ರೆಯುದ್ದಕ್ಕೂ ಕಥಾವಸ್ತು ಮತ್ತು ಆಶಯಗಳು ಆಯಾ ಕಾಲಘಟ್ಟಕ್ಕೆ

ಅನುಗುಣವಾಗಿ ಸಮಕಾಲೀನ ಜೀವನದ ಪ್ರತಿನಿಧಿಕರಣವನ್ನು ಸೂಚಿಸುತ್ತದೆ. ವರ್ತಮಾನದಲ್ಲಿ ನಿಂತು ಭವಿಷ್ಯದ ಬದುಕಿನ ಜೀವನ ಮೌಲ್ಯಗಳನ್ನು ಕಟ್ಟಿಕೊಳ್ಳಲು ಕನ್ನಡ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಂಶುಪಾಲ ಡಾ.ಡಿ.ಸುಧಾಕರ್ ಅವರು ಕನ್ನಡ ಸಾಹಿತ್ಯ ಇಂಗ್ಲಿಷ್ ಸಾಹಿತ್ಯದ ಸಂವೇದನೆ ಕುರಿತು ಮಾತಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಸೋಮಶೇಖರ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕರಾದ ಡಾ. ಹಾಲ್ಕರ್ ರಾಚಪ್ಪ, ಡಾ.ಎನ್. ಸತ್ಯವತಿ, ಶ್ರೀ ಮುತ್ತೇಗೌಡ, ಡಾ.ಎಂ.ವೇದಾಂತ ಏಳಂಜಿ, ಹುಲಿಕುಂಟೇಶ್ವರ, ಹನುಮಂತಪ್ಪ ಮತ್ತಿತರರಿದ್ದರು.

ಉಪನ್ಯಾಸಕ ಎಚ್‌.ಗಿರಿರಾಜಪ್ಪ, ವಿದ್ಯಾರ್ಥಿಗಳಾದ ಸಿ.ಬಿ.ನೀಲಾವತಿ ಹಾಗೂ ಮೌಲಮ್ಮ ಕಾರ್ಯಕ್ರಮ ನಿರ್ವಹಿಸಿದರು.

Share this article