ಹಳಿಯಾಳ: ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬುಧವಾರ ಸಂಜೆ ಬಿರುಗಾಳಿ, ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಟಾವಿಗೆ ಬಂದಂತಹ ಮಾವಿನ ಫಸಲು ಸಂಪೂರ್ಣವಾಗಿ ನೆಲಕ್ಕುದುರಿ ಬಿದ್ದಿದೆ.
ಮಾವಿನ ಹಂಗಾಮು ಆರಂಭಗೊಂಡಿದ್ದು, ಮಾವು ಮಾರಾಟ ಮಾಡಿ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರ ಕನಸು ಕಮರಿ ಹೋದಂತಾಗಿದೆ.ಕಾವಲವಾಡ, ತತ್ವಣಗಿ, ನಾಗಶೆಟ್ಟಿಕೊಪ್ಪ, ಮಂಗಳವಾಡ, ಯಡೋಗಾ, ಮೊದಲಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಹಲವಾರು ಮನೆಯ ಮೇಲ್ಚಾವಣಿಗಳು ಹಾರಿ ಹೋಗಿದ್ದರೆ, ಮಾವಿನ ತೋಟಗಳೇ ನಾಶವಾಗಿರುವ ಬಗ್ಗೆ ವರದಿಗಳು ಬರುತ್ತಿವೆ ಎಂದು ತಾಲೂಕಾಡಳಿತ ತಿಳಿಸಿದೆ.
ಯಡೋಗಾ, ಕೆಸರೊಳ್ಳಿ, ಮೊದಲಗೇರಾ, ಬೆಳವಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಬೀಸಿದ ಬಿರುಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಮರಗಳು, ಮರಗಳ ಟೊಂಗೆಗಳು ಬಿದ್ದ ಪರಿಣಾಮ ಈ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿತು. ಮಳೆ ನಿಂತ ಮೇಲೆ ಕಾರ್ಯಪ್ರವೃತ್ತರಾದ ಹೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದು, ಹಾನಿಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ ತಿಳಿಸಿದ್ದಾರೆ.ಮಾವು ಬೆಳೆ ಹಾನಿಯ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎ.ಆರ್. ಹಿರಿಯಾಲ್, ತಾಲೂಕಿನಲ್ಲಿ 787 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಬೆಳೆಸಲಾಗುತ್ತಿದೆ. ಹಳಿಯಾಳದ ಬೆಳೆಯುವ ವಿಶಿಷ್ಟ ತಳಿಯ ಅಲ್ಫೋನ್ಸೊ ಮಾವಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. 2023-24ನೇ ಸಾಲಿನಲ್ಲಿ ಹವಾಮಾನ ಆಧಾರಿಯ ಬೆಳೆ ವಿಮಾ ಯೋಜನೆಯಡಿ ಹಳಿಯಾಳ ತಾಲೂಕಿಗೆ ಮಾವಿನ ಬೆಳೆಹಾನಿ ಪರಿಹಾರವಾಗಿ ಅಂದಾಜು ₹80 ಲಕ್ಷ ಮಂಜೂರಾಗಿತ್ತು. ಈ ವರ್ಷ ಅಪಾರ ಪ್ರಮಾಣದಲ್ಲಿ ಮಾವಿನ ಬೆಳೆಗಳಿಗೆ ಹಾನಿಯಾಗಿರುವುದಾಗಿ ರೈತರಿಂದ ಮಾಹಿತಿ ಬರುತ್ತಿದೆ. ನಮ್ಮ ಇಲಾಖೆ ಮತ್ತು ಕಂದಾಯ ಇಲಾಖೆಯಿಂದಲೂ ಬೆಳೆಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಇನ್ನೂವರೆಗೆ ರೈತರು ಮಾವಿನ ಫಸಲಿನ ಬೆಳೆವಿಮೆ ಮಾಡದವರು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಯಲ್ಲಾಪುರದಲ್ಲಿ ಧರೆಗುರುಳಿದ ಅಡಕೆ ಮರ, ಬಾಳೆಗಿಡ:ಯಲ್ಲಾಪುರ ತಾಲೂಕಿನಲ್ಲಿ ಅಕಾಲಿಕ ಮಳೆ, ಜೋರಾದ ಗಾಳಿಯಿಂದ ಹಲವೆಡೆ ಹಾನಿ ಉಂಟಾಗಿದೆ. ಪಟ್ಟಣದ ಸಮೀಪದ ಎರಕನಬೈಲಿನ ಅಶೋಕ ಪಾಟಣಕರ್ ಅವರ ತೋಟದಲ್ಲಿ ಅಡಕೆ ಮರ ಹಾಗೂ ಬಾಳೆಗಿಡಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ. ಮಳೆಯಿಂದಾದ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಶೋಕ ಪಾಟಣಕರ್ ಆಗ್ರಹಿಸಿದ್ದಾರೆ.